ನರೇಂದ್ರ ಮೋದಿ ಸ್ಟೇಡಿಯಂಗೆ ಬಾಂಬ್ ಬೆದರಿಕೆ

Photo Credit : PTI
ಅಹ್ಮದಾಬಾದ್, ಅ. 7: ಭಾರತದ ಅಂಡರ್-19 ಹಾಗೂ ಆಸ್ಟ್ರೇಲಿಯದ ಅಂಡರ್-19 ತಂಡಗಳ ನಡುವೆ ಮೈದಾನ ‘ಎ’ನಲ್ಲಿ ಎರಡನೇ ಚತುರ್ದಿನ ಪಂದ್ಯ ನಡೆಯುತ್ತಿದ್ದಾಗ ಬುಧವಾರ ಬೆಳಗ್ಗೆ ನರೇಂದ್ರ ಮೋದಿ ಸ್ಟೇಡಿಯಂಗೆ ಬಾಂಬ್ ಬೆದರಿಕೆ ಒಡ್ಡಲಾಗಿದೆ.
ಕ್ರೀಡಾಂಗಣ ಮಾತ್ರವಲ್ಲ ಅಹ್ಮದಾಬಾದ್ ನಾದ್ಯಂತ ಇರುವ ಹೈಕೋರ್ಟ್ ಹಾಗೂ ಹಲವಾರು ಶಾಲಾ-ಕಾಲೇಜುಗಳಿಗೂ ಬೆಳಗ್ಗೆ ಸುಮಾರು 11 ಗಂಟೆಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದಿವೆ.
ನವೆಂಬರ್ 21ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ದಿಲ್ಜಿತ್ ದೋಸಾಂಜ್ ಅವರ ಸಂಗೀತ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ಬೆದರಿಕೆ ಒಡ್ಡುವ ಇ-ಮೇಲ್ ಕುರಿತು ವಿಚಾರಿಸಲು ಸೈಬರ್ ಸೆಲ್ ನ ತಂಡವೊಂದು ಕ್ರೀಡಾಂಗಣಕ್ಕೆ ಆಗಮಿಸಿತು.
‘‘ಇ-ಮೇಲ್ ಬಂದ ತಕ್ಷಣ ನಾವು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದೆವು. 2023ರ ವಿಶ್ವಕಪ್ ಹಾಗೂ ಐಪಿಎಲ್ ಸಮಯ ಸೇರಿದಂತೆ ಈ ಹಿಂದೆಯೂ ಇಂತಹ ಘಟನೆಗಳು ಒಂದೆರಡು ಬಾರಿ ನಡೆದಿವೆ’’ ಎಂದು ಗುಜರಾತ್ ಕ್ರಿಕೆಟ್ ಅಸೋಸಿಯೇಶನ್ ಕಾರ್ಯದರ್ಶಿ ಅನಿಲ್ ಪಟೇಲ್ ಹೇಳಿದ್ದಾರೆ.
ಬೆದರಿಕೆಯ ಇ-ಮೇಲ್ ಬಂದಾಗ ಉಭಯ ತಂಡಗಳು ಕ್ರೀಡಾಂಗಣದ ಆವರಣದಲ್ಲಿದ್ದವು. ಬೆದರಿಕೆಯ ಬಗ್ಗೆ ಆಟಗಾರರಿಗೆ ತಕ್ಷಣವೇ ತಿಳಿಸಲಾಗಿರಲಿಲ್ಲ. ಮಾಹಿತಿ ದೊರೆತ ತಕ್ಷಣ, ನಿಯಮಾವಳಿಯಂತೆ ಮಧ್ಯಾಹ್ನ 1 ಗಂಟೆಯ ನಂತರ ಎರಡೂ ತಂಡಗಳು ಕ್ರೀಡಾಂಗಣದಿಂದ ನಿರ್ಗಮಿಸಿದವು.
ಅದೊಂದು ಹುಸಿ ಬಾಂಬ್ ಬೆದರಿಕೆಯಾಗಿತ್ತು ಎಂದು ಸ್ಥಳೀಯ ಪೊಲೀಸರು ಬಳಿಕ ಖಚಿತಪಡಿಸಿದರು.






