ವಿಂಬಲ್ಡನ್ ಫೇಸ್ ಬುಕ್ ಪೇಜ್ನಲ್ಲಿ ‘ಗೋಲ್ಡನ್ ಸ್ಟಾರ್’ ಆದ ʼನಮ್ಮಣ್ಣ ಬೋಪಣ್ಣʼ
ಅಧಿಕೃತ ಪೇಜ್ ನಲ್ಲಿ ಕನ್ನಡದ ಕಂಪು: ಕನ್ನಡಾಭಿಮಾನಿಗಳು ಫಿದಾ!

ಬೋಪಣ್ಣ | PC : X
ಲಂಡನ್: ಭಾರತದ ಹಿರಿಯ ಟೆನಿಸ್ ತಾರೆ ರೋಹನ್ ಬೋಪಣ್ಣ ವಿಂಬಲ್ಡನ್ ಚಾಂಪಿಯನ್ ಶಿಪ್ನಲ್ಲಿ 17ನೇ ಬಾರಿ ಪುರುಷರ ಡಬಲ್ಸ್ನಲ್ಲಿ ತನ್ನ ಅಭಿಯಾನವನ್ನು ಬುಧವಾರ ಆರಂಭಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ವಿಂಬಲ್ಡನ್ ಫೇಸ್ ಬುಕ್ ಪೇಜ್ ನಲ್ಲಿ ಬೋಪಣ್ಣ ಅವರ ಚಿತ್ರದೊಂದಿಗೆ ‘ಗೋಲ್ಡನ್ ಸ್ಟಾರ್’ ಎಂದು ಕನ್ನಡದಲ್ಲಿ ಬರೆಯಲಾಗಿದೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
2025ರ ಪ್ರತಿಷ್ಠಿತ ವಿಂಬಲ್ಡನ್ ಋತು ಜೂನ್ 23ರಿಂದ ಪ್ರಾರಂಭಗೊಂಡಿದ್ದು, ಇದೇ ಜುಲೈ 13ಕ್ಕೆ ಮುಕ್ತಾಯಗೊಳ್ಳಲಿದೆ.
ವಿಂಬಲ್ಡನ್ ನ ಈ ಪೋಸ್ಟರ್ ಗೆ ಕನ್ನಡಾಭಿಮಾನಿಗಳಿಂದ ಮೆಚ್ಚುಗೆಯ ಸುರಿಮಳೆಯಾಗುತ್ತಿದ್ದು, ಕನ್ನಡಿಗ ಟೆನಿಸ್ ಪಟು ರೋಹನ್ ಬೋಪಣ್ಣ ಅವರ ಭಾವಚಿತ್ರವನ್ನೊಳಗೊಂಡಿರುವ ಪೋಸ್ಟರ್ ಅನ್ನು ಬಿಡುಗಡೆ ಮಾಡಿರುವುದಕ್ಕೆ ಅವರೆಲ್ಲ ವಿಂಬಲ್ಡನ್ ಸಂಘಟಕರಿಗೆ ಧನ್ಯವಾದ ಸಲ್ಲಿಸಿದ್ದಾರೆ.
‘‘ಕನ್ನಡ ಭಾಷೆಯ ಬಗ್ಗೆ ಪ್ರೀತಿ ವ್ಯಕ್ತಪಡಿಸಿರುವ ವಿಂಬಲ್ಡನ್ ಗೆ ಧನ್ಯವಾದಗಳು’’ ಎಂದು ಗೋಪಿ ಕನ್ನಡಿಗ, ತುಮಕೂರು ಎಂಬವರು ಬರೆದಿದ್ದಾರೆ.
ನೇಹಾ ಎಸ್ ಎಂಬವರು, ಇದೊಂದು ಸಿಹಿ ಸುದ್ದಿ! ನಮ್ಮ ಪ್ರಾದೇಶಿಕ ಭಾಷೆಗಳು ಜಾಗತಿಕ ವೇದಿಕೆಯಲ್ಲಿ ಸ್ಥಾನ ಪಡೆಯಬೇಕು ಎಂದು ಸಂತಸ ಹಂಚಿಕೊಂಡಿದ್ದಾರೆ.
ಮೋಹನಾಮೃಥ ಶೇಖರ್ ಎಂಬವರು, ವಿಂಬಲ್ಡನ್ ಫೇಜ್ ಗೆ ಧನ್ಯವಾದಗಳು. ನಿಮ್ಮ ಕನ್ನಡ ಪೋಸ್ಟ್ ತುಂಬಾ ಖುಷಿ ಕೊಟ್ಟಿದೆ. ನೀವು ಕನ್ನಡಿಗರ ಮನಸ್ಸು ಗೆದ್ದಿದ್ದೀರಿ ಎಂದು ಶಹಬಾಸ್ ಗಿರಿ ನೀಡಿದ್ದಾರೆ.
ಕಾಕತಾಳೀಯವಂಬಂತೆ ಇವತ್ತು ಗೋಲ್ಡನ್ ಸ್ಟಾರ್ ಗಣೇಶ್ ಅವರು ಹುಟ್ಟಿದ ಹಬ್ಬ ಎಂದು ನಿರಂಜನ್ ರಾಜ್ ಅರಸ್ ಎಂಬವರು ನೆನಪಿಸಿದ್ದಾರೆ. ನಮ್ಮ ಕನ್ನಡ ನಮ್ಮ ಹಮ್ಮೆ. ಧನ್ಯವಾದಗಳು. ವಿಂಬಲ್ಡನ್ ಬಾರಿಸು ಕನ್ನಡ ಡಿಂಡಿಮವ ಎಂದು ಅನಾಮಿಕ ಅಭಿ ಎಂಬವರು ಕಮೆಂಟ್ ಪೋಸ್ಟ್ ಮಾಡಿದ್ದಾರೆ. ಕಣ್ಣೀರು ತುಂಬಿಕೊಂಡ ಕ್ಷಣ.ನನ್ನ ಮಾತೃಭಾಷೆ ಪ್ರಪಂಚದಾದ್ಯಂತ ವಿಜೃಂಭಿಸುತ್ತಿದೆ ಎಂದು ಧನ್ಯವಾದ ಅರ್ಪಿಸಿದ್ದಾರೆ ಬಾಲಕೃಷ್ ಎಂಬ ಬಳಕೆದಾರರು.
ಈ ಚಾಂಪಿಯನ್ ಶಿಪ್ ನಲ್ಲಿ ಬೋಪಣ್ಣ ಅವರು ಮೂರು ಬಾರಿ (2013, 2015 ಹಾಗೂ 2023)ಸೆಮಿ ಫೈನಲ್ ಹಂತ ತಲುಪುವಲ್ಲಿ ಶಕ್ತರಾಗಿದ್ದಾರೆ. ಕಳೆದ ವರ್ಷ ರೋಹನ್ ಅವರು ತನ್ನ ಜೊತೆಗಾರ ಮ್ಯಾಥ್ಯೂ ಎಬ್ಡೆನ್ ಅವರೊಂದಿಗೆ ಆಡಿದ್ದು, 2ನೇ ಸುತ್ತಿನಲ್ಲಿ ಸೋತಿದ್ದರು. ಈ ಬಾರಿ ಸ್ಯಾಂಡರ್ ಗಿಲ್ಲೆ ಜೊತೆಗೂಡಿ ಟೂರ್ನಿಯಲ್ಲಿ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ.







