ಮಯಾಮಿ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಂಡ ಬೋಪಣ್ಣ-ಎಡ್ಬೆನ್ ಜೋಡಿ

ಎಡ್ಬೆನ್ , ಬೋಪಣ್ಣ | Photo: NDTV
ಮಿಯಾಮಿ: ತಮ್ಮ ಆಸ್ಟ್ರೇಲಿಯಾ ಜೊತೆಗಾರ ಮ್ಯಾಟ್ ಎಡ್ಬೆನ್ ಅವರೊಂದಿಗೆ ಮಿಯಾಮಿ ಓಪನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಮೂಲಕ ಭಾರತದ ಖ್ಯಾತ ಟೆನಿಸ್ ಪಟು ರೋಹನ್ ಬೋಪಣ್ಣ ಮತ್ತೊಂದು ದಾಖಲೆಯನ್ನು ಬರೆದಿದ್ದಾರೆ. ಆ ಮೂಲಕ ಅತ್ಯಂತ ಹಿರಿಯ ಎಟಿಪಿ ಮಾಸ್ಟರ್ಸ್ 1000 ಚಾಂಪಿಯನ್ ಆಗಿ ಮುಂದುವರಿದಿದ್ದಾರೆ.
ಈ ವರ್ಷದ ತಮ್ಮ ಉತ್ತಮ ಓಟವನ್ನು ಮುಂದುವರಿಸಿದ 44 ವರ್ಷದ ರೋಹನ್ ಬೋಪಣ್ಣ ಹಾಗೂ ಎಡ್ಬೆನ್ ಜೋಡಿ, 6-7(3), 6-3 ಹಾಗೂ 10-6ರ ಅಂತರದಲ್ಲಿ ಕ್ರೊವೇಶಿಯಾದ ಇವಾನ್ ಡಾಡಿಗ್ ಹಾಗೂ ಅಮೆರಿಕಾದ ಆಸ್ಟಿನ್ ಕ್ರಾಜಿಸೆಕ್ ಜೋಡಿಯನ್ನು ಶನಿವಾರ ಹಾರ್ಡ್ ರಾಕ್ ಕ್ರೀಡಾಂಗಣದಲ್ಲಿ ಮಣಿಸುವ ಮೂಲಕ ಮಿಯಾಮಿ ಓಪನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಈ ಗೆಲುವಿನೊಂದಿಗೆ ಕಳೆದ ವರ್ಷ ತಮ್ಮ 43ನೇ ವಯಸ್ಸಿನಲ್ಲಿ ಇಂಡಿಯನ್ ವೆಲ್ಸ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ನಿರ್ಮಿಸಿದ್ದ ತಮ್ಮದೇ ದಾಖಲೆಯನ್ನು ರೋಹಣ್ ಬೋಪಣ್ಣ ಮುರಿದರು. ಇದರೊಂದಿಗೆ ಡಬಲ್ಸ್ ವಿಭಾಗದಲ್ಲಿ ಮರಳಿ ವಿಶ್ವ ಅಗ್ರ ಶ್ರೇಯಾಂಕಕ್ಕೆ ಏರಿದರು.





