FIFA 2026 | ಖತರ್ ವಿರುದ್ಧ ಬೋಸ್ನಿಯಾ ತಂಡಕ್ಕೆ 3-1 ಅಂತರದ ಗೆಲುವು; ನಾಕೌಟ್ ಆಸೆ ಜೀವಂತ

Photo: x.com/FBosnio
ಸಿಯಾಟಲ್, ವಾಷಿಂಗ್ಟನ್: ಬಿ ಗುಂಪಿನ ಪಂದ್ಯದಲ್ಲಿ ಖತರ್ ತಂಡವನ್ನು 3-1 ಅಂತರದಿಂದ ಸೋಲಿಸುವ ಮೂಲಕ ಬೋಸ್ನಿಯಾ-ಹರ್ಜೆಗೋವಿನಾ ತಂಡವು ಮೊದಲ ಬಾರಿಗೆ ವಿಶ್ವಕಪ್ ನಾಕೌಟ್ ಪ್ರವೇಶದ ಸಾಧ್ಯತೆಯನ್ನು ಜೀವಂತವಾಗಿರಿಸಿದೆ.
ಈ ಸೋಲಿನೊಂದಿಗೆ ಖತರ್ ತಂಡವು ಟೂರ್ನಿಯಿಂದ ಹೊರಬಿದ್ದಿದ್ದು, 12 ವರ್ಷಗಳಲ್ಲಿ ತನ್ನ ಮೊದಲ ವಿಶ್ವಕಪ್ ಗೆಲುವು ಸಾಧಿಸಿದ ಬೋಸ್ನಿಯಾ, ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿರುವ ಕೆನಡಾ ತಂಡದಷ್ಟೇ ಅಂಕಗಳನ್ನು ಗಳಿಸಿತು. ಆದರೆ ಹೆಡ್-ಟು-ಹೆಡ್ ನಿಯಮಗಳ ಕಾರಣದಿಂದಾಗಿ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
ಕೆರಿಮ್ ಅಲಜ್ಬೆಗೋವಿಕ್ ದೂರದಿಂದ ಅದ್ಭುತ ಗೋಲು ಗಳಿಸುವ ಮೂಲಕ ಬೋಸ್ನಿಯಾ ತಂಡದ ಖಾತೆ ತೆರೆದರು. ಆ ನಂತರ ಎಡಿನ್ ಡಿಜೆಕೊ ಅವರ ಗೋಲು ಪ್ರಯತ್ನದ ಹೊಡೆತವು ಖತರ್ ತಂಡದ ಸುಲ್ತಾನ್ ಅಲ್ ಬ್ರೇಕ್ ಅವರಿಗೆ ತಗುಲಿ, ಗೋಲ್ಕೀಪರ್ ಅಬುನಾಡಾ ಅವರನ್ನು ವಂಚಿಸಿ ಎದುರಾಳಿ ತಂಡಕ್ಕೆ ಗೋಲು ನೀಡುವ ಮೂಲಕ ಬೋಸ್ನಿಯಾ ಅಂತರವು 2-0ಕ್ಕೆ ಏರಿತು.
ಈ ಹಂತದಲ್ಲಿ ತೀವ್ರ ಪ್ರತಿರೋಧ ತೋರಿದ ಖತರ್, ಹಸನ್ ಅಲ್ ಹೈದೋಸ್ ಮೂಲಕ ಗೋಲು ಗಳಿಸಿ ಅಂತರವನ್ನು ಕುಗ್ಗಿಸಿದರು. ದ್ವಿತೀಯಾರ್ಧದಲ್ಲಿ ಎರ್ಮಿನ್ ಮಹ್ಮಿಕ್ ಮೂಲಕ ಬೋಸ್ನಿಯಾ ಮತ್ತೊಂದು ಗೋಲು ಗಳಿಸಿ ಗೆಲುವು ಖಚಿತಪಡಿಸಿತು.
ಪಂದ್ಯದಲ್ಲಿ ಬೋಸ್ನಿಯಾ ತಂಡವು 5 ನೇರ ಗುರಿಯೊಂದಿಗೆ 14 ಬಾರಿ ಪ್ರಯತ್ನ ನಡೆಸಿದರೆ, ಖತರ್ ತಂಡವು 3 ನೇರ ಗುರಿಯೊಂದಿಗೆ 9 ಬಾರಿ ಪ್ರಯತ್ನ ನಡೆಸಿತು.






