Boxing Day Test | ಆಸ್ಟ್ರೇಲಿಯದ 12 ಆಟಗಾರರ ತಂಡ ಪ್ರಕಟ; ಮರಳಿದ ನಾಯಕ ಸ್ಟೀವ್ ಸ್ಮಿತ್

ಸ್ಟೀವ್ ಸ್ಮಿತ್ | Photo Credit : PTI
ಮೆಲ್ಬರ್ನ್, ಡಿ. 25: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಗೆ ಆಸ್ಟ್ರೇಲಿಯ ತಂಡಕ್ಕೆ ನಾಯಕ ಸ್ಟೀವ್ ಸ್ಮಿತ್ ಮರಳಿದ್ದಾರೆ. ಜೊತೆಗೆ, ಆಸ್ಟ್ರೇಲಿಯವು ತನ್ನ 12 ಆಟಗಾರರ ತಂಡಕ್ಕೆ ನಾಲ್ವರು ವೇಗದ ಬೌಲರ್ ಗಳನ್ನು ಸೇರಿಸಿಕೊಂಡಿದೆ.
ಆದರೆ, ನತಾನ್ ಲಯೋನ್ ಸ್ಥಾನಕ್ಕೆ ತರಲಾಗಿರುವ ಸ್ಪಿನ್ನರ್ ಟಾಡ್ ಮರ್ಫಿಗೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ.
ವೇಗದ ಬೌಲರ್ ಝಯ್ ರಿಚರ್ಡ್ಸನ್ 2021ರ ಬಳಿಕ ಟೆಸ್ಟ್ ನಲ್ಲಿ ಆಡಿಲ್ಲ. ಆದರೆ, ಭುಜದ ಗಾಯದಿಂದ ಚೇತರಿಸಿಕೊಂಡ ಬಳಿಕ ಅವರು ದೇಶಿ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹಾಗಾಗಿ ಅವರನ್ನು ಟೆಸ್ಟ್ ತಂಡಕ್ಕೆ ಮರಳಿ ತರಲಾಗಿದೆ.
ಮೊದಲ ಎರಡು ಟೆಸ್ಟ್ಗಳಲ್ಲಿ ಆಡಿರುವ ಬ್ರೆಂಡನ್ ಡಾಗೆಟ್ ಮತ್ತು ಮೈಕೆಲ್ ನೇಸರ್ರನ್ನೂ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
‘‘ಯಾವ ಮೈದಾನವನ್ನು ಆಡಲು ನಿಮಗೆ ಕೊಡಲಾಗುತ್ತದೆಯೋ ಅದರಲ್ಲಿ ಆಡಬೇಕು’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಸ್ಮಿತ್ ಹೇಳಿದರು. ಅವರು ಅಸ್ವಸ್ಥತೆಯಿಂದಾಗಿ ಅಡಿಲೇಡ್ ಟೆಸ್ಟ್ ನಿಂದ ಹೊರಗಿದ್ದರು.
ಬಾಕ್ಸಿಂಗ್ ಡೇ ಟೆಸ್ಟ್ ಶುಕ್ರವಾರ ಮೆಲ್ಬರ್ನ್ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿದೆ.
ಐದು ಟೆಸ್ಟ್ ಗಳ ಆ್ಯಶಸ್ ಸರಣಿಯ ಮೊದಲ ಮೂರು ಪಂದ್ಯಗಳನ್ನು ಗೆದ್ದಿರುವ ಆಸ್ಟ್ರೇಲಿಯ ಸರಣಿಯನ್ನು ಈಗಾಗಲೇ ಗೆದ್ದಿದೆ. ಅದು ಈಗ 3-0 ಅಂತರದಿಂದ ಮುಂದಿದೆ.
ತಂಡ: ಟ್ರಾವಿಸ್ ಹೆಡ್, ಜೇಕ್ ವೆದರಾಲ್ಡ್, ಮಾರ್ನಸ್ ಲಾಬುಶಾನ್, ಸ್ಟೀವ್ ಸ್ಮಿತ್ (ನಾಯಕ), ಉಸ್ಮಾನ್ ಖ್ವಾಜಾ, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮರೂನ್ ಗ್ರೀನ್, ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೊಲ್ಯಾಂಡ್, ಬ್ರೆಂಡನ್ ಡಾಗೆಟ್, ಮೈಕಲ್ ನೇಸರ್, ಝಯ್ ರಿಚರ್ಡ್ಸನ್.







