ನವಜೋತ್ ಸಿಂಗ್ ದಾಖಲೆ ಮುರಿದು ಇತಿಹಾಸ ನಿರ್ಮಿಸಿದ ಬ್ರೀಟ್ಝ್ಕೆ

ಮ್ಯಾಥ್ಯೂ ಬ್ರೀಟ್ಝ್ಕೆ | PC : X
ಮಕಾಯ್, ಆ.22: ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಸತತ ನಾಲ್ಕು ಬಾರಿ ಅರ್ಧಶತಕ ಹಾಗೂ ಅದಕ್ಕಿಂತ ಹೆಚ್ಚು ಸ್ಕೋರ್ ಗಳಿಸುವ ಮೂಲಕ ತನ್ನ ವೃತ್ತಿಜೀವನ ಆರಂಭಿಸಿದ ಮೊದಲ ಕ್ರಿಕೆಟಿಗನಾಗಿರುವ ದಕ್ಷಿಣ ಆಫ್ರಿಕಾದ ಬ್ಯಾಟರ್ ಮ್ಯಾಥ್ಯೂ ಬ್ರೀಟ್ಝ್ಕೆ ಹೊಸ ದಾಖಲೆ ನಿರ್ಮಿಸಿದ್ದಾರೆ.
26ರ ಹರೆಯದ ಬ್ರೀಟ್ಝ್ಕೆ ಆಸ್ಟ್ರೇಲಿಯ ತಂಡ ವಿರುದ್ಧದ 2ನೇ ಏಕದಿನ ಪಂದ್ಯದ ವೇಳೆ 78 ಎಸೆತಗಳಲ್ಲಿ 88 ರನ್ ಗಳಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ. ಈ ಮೈಲಿಗಲ್ಲು ತಲುಪುವ ಮೂಲಕ ಭಾರತದ ಮಾಜಿ ಸ್ಟಾರ್ ನವಜೋತ್ ಸಿಂಗ್ ಸಿಧು ದಾಖಲೆಯನ್ನು ಮುರಿದರು. 1987ರ ವಿಶ್ವಕಪ್ ನಲ್ಲಿ ಸಿಧು 5 ಪಂದ್ಯಗಳಲ್ಲಿ 4 ಅರ್ಧಶತಕಗಳನ್ನು ಗಳಿಸಿದ್ದರೆ, ಬ್ರೀಟ್ಝ್ಕೆ ಅವರು ಕೇವಲ 4 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಈ ವರ್ಷಾರಂಭದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧದ ತನ್ನ ಚೊಚ್ಚಲ ಏಕದಿನ ಪಂದ್ಯದಲ್ಲಿ ಬ್ರೀಟ್ಝ್ಕೆ 150 ರನ್ ಗಳಿಸಿದ್ದರು. ಇದರೊಂದಿಗೆ ತನ್ನ ಮೊದಲ ಪಂದ್ಯದಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ಮೊದಲ ಬ್ಯಾಟರ್ ಎನಿಸಿಕೊಂಡು ದಾಖಲೆ ನಿರ್ಮಿಸಿದ್ದರು. ಅನಂತರ ಪಾಕಿಸ್ತಾನದ ಎದುರು 83, ಆಸ್ಟ್ರೇಲಿಯದ ವಿರುದ್ಧ ಪ್ರಸಕ್ತ ಸರಣಿಯ ಮೊದಲ ಪಂದ್ಯದಲ್ಲಿ 57 ಹಾಗೂ ಶುಕ್ರವಾರ 88 ರನ್ ಸಿಡಿಸಿದ್ದಾರೆ.
ಸಿಧು 1987ರಲ್ಲಿ ಆಸ್ಟ್ರೇಲಿಯದ ವಿರುದ್ಧ 73, ನ್ಯೂಝಿಲ್ಯಾಂಡ್ ವಿರುದ್ಧ 75, ಆಸ್ಟ್ರೇಲಿಯ ವಿರುದ್ಧ 51 ಹಾಗೂ ಝಿಂಬಾಬ್ವೆ ಎದುರು 55 ರನ್ ಗಳಿಸಿದ್ದರು. ಆಗ ಸಿಧು ಅವರು ಝಿಂಬಾಬ್ವೆ ವಿರುದ್ಧ ತನ್ನ 3ನೇ ಪಂದ್ಯ ಆಡಿರಲಿಲ್ಲ. ಹೀಗಾಗಿ ಅವರು ಐದು ಏಕದಿನ ಪಂದ್ಯಗಳಲ್ಲಿ 4 ಅರ್ಧಶತಕಗಳನ್ನು ಗಳಿಸಿದ್ದರು.
ದಕ್ಷಿಣ ಆಫ್ರಿಕಾ ತಂಡ ಇಬ್ಬರು ಆರಂಭಿಕ ಆಟಗಾರರನ್ನು ಕ್ಸೇವಿಯರ್ ಬಾರ್ಟ್ಲೆಟ್ ಬೌಲಿಂಗ್ ನಲ್ಲಿ ಅಲ್ಪ ಮೊತ್ತಕ್ಕೆ ಕಳೆದುಕೊಂಡಿತು. ಆಗ ಟೋನಿ ಡಿ ರೆರ್ಝಿ(38) ಹಾಗೂ ಟ್ರಿಸ್ಟನ್ ಸ್ಟಬ್ಸ್(74 ರನ್,87 ಎಸೆತ)ಅವರೊಂದಿಗೆ ಅರ್ಧಶತಕದ ಜೊತೆಯಾಟ ನಡೆಸಿದ ಬ್ರೀಟ್ಝ್ಕೆ ತಂಡವನ್ನು ಆಧರಿಸಿದರು.
ತನ್ನ ಇನಿಂಗ್ಸ್ ನಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ಗಳನ್ನು ಸಿಡಿಸಿದ ಬ್ರೀಟ್ಝ್ಕೆ, ಕೇವಲ 12 ರನ್ನಿಂದ ಶತಕ ವಂಚಿತರಾದರು. ಬ್ರೀಟ್ಝ್ಕೆ ಅವರ ಕೊಡುಗೆಯ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ 49.1 ಓವರ್ಗಳಲ್ಲಿ 277 ರನ್ ಗಳಿಸಿತು.
*ಈ ತನಕ ಏಕದಿನ ಕ್ರಿಕೆಟ್ನಲ್ಲಿ ಮ್ಯಾಥ್ಯೂ ಬ್ರೀಟ್ಝ್ಕೆ ಸಾಧನೆ
150-ನ್ಯೂಝಿಲ್ಯಾಂಡ್ ವಿರುದ್ಧ, ಲಾಹೋರ್
83-ಪಾಕಿಸ್ತಾನದ ವಿರುದ್ಧ, ಕರಾಚಿ
57-ಆಸ್ಟ್ರೇಲಿಯದ ವಿರುದ್ಧ, ಕೈರ್ನ್ಸ್
88-ಆಸ್ಟ್ರೇಲಿಯದ ವಿರುದ್ಧ, ಮಕಾಯ್







