ಸಚಿನ್ ತೆಂಡುಲ್ಕರ್ರ ದೀರ್ಘಕಾಲೀನ ದಾಖಲೆ ಮುರಿದ ಬ್ರೆಂಡನ್ ಟೇಲರ್

ಬ್ರೆಂಡನ್ ಟೇಲರ್ , ಸಚಿನ್ ತೆಂಡುಲ್ಕರ್ | Photo Credit : PTI
ಹೊಸದಿಲ್ಲಿ: ಝಿಂಬಾಬ್ವೆ ತಂಡದ ಹಿರಿಯ ಬ್ಯಾಟರ್ ಬ್ರೆಂಡನ್ ಟೇಲರ್ ಆಸ್ಟ್ರೇಲಿಯ ತಂಡದ ವಿರುದ್ಧ ಹರಾರೆಯಲ್ಲಿ ಮಂಗಳವಾರ ನಡೆದ ಮೊದಲ ಏಕದಿನ ಪಂದ್ಯವನ್ನಾಡಲು ಮೈದಾನಕ್ಕೆ ಇಳಿಯುವ ಮೂಲಕ ಸಚಿನ್ ತೆಂಡುಲ್ಕರ್ ಅವರ ದೀರ್ಘಕಾಲೀನ ದಾಖಲೆಯನ್ನು ಮುರಿದರು.
ಪುರುಷರ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ದೀರ್ಘ ಸಮಯ ಆಡಿದ ಮೊದಲ ಆಟಗಾರನೆಂಬ ಹಿರಿಮೆಗೆ ಟೇಲರ್ ಪಾತ್ರರಾಗಿದ್ದಾರೆ.
ಶ್ರೀಲಂಕಾದ ವಿರುದ್ಧ ಹರಾರೆಯಲ್ಲಿ ಕ್ರಿಕೆಟಿಗೆ ಕಾಲಿಟ್ಟ 22 ವರ್ಷಗಳ ನಂತರ ವಿಕೆಟ್ಕೀಪರ್-ಬ್ಯಾಟರ್ ಟೇಲರ್ ತನ್ನ 208ನೇ ಏಕದಿನ ಪಂದ್ಯವನ್ನಾಡಿದರು. ಟೇಲರ್ ಅವರ ಏಕದಿನ ಕ್ರಿಕೆಟ್ ವೃತ್ತಿಜೀವನವು 22 ವರ್ಷ ಹಾಗೂ ನಾಲ್ಕು ತಿಂಗಳುಗಳಿಗೆ ವಿಸ್ತರಿಸಿದೆ. ಇದರೊಂದಿಗೆ ತೆಂಡುಲ್ಕರ್ರನ್ನು ಹಿಂದಿಕ್ಕಿದ್ದಾರೆ.
ಸಚಿನ್ ತೆಂಡುಲ್ಕರ್ 22 ವರ್ಷ ಹಾಗೂ ಮೂರು ತಿಂಗಳ ಕಾಲ 50 ಓವರ್ಗಳ ಪಂದ್ಯ ಆಡಿದ ನಂತರ 2012ರಲ್ಲಿ ನಿವೃತ್ತಿಯಾಗಿದ್ದರು.
ಏಕದಿನ ಕ್ರಿಕೆಟ್ನಲ್ಲಿ ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ ತೆಂಡುಲ್ಕರ್ ಅಗ್ರ ಸ್ಥಾನದಲ್ಲೇ ಉಳಿದಿದ್ದು, 463 ಪಂದ್ಯಗಳಲ್ಲಿ 18,426 ರನ್ ಗಳಿಸಿದ್ದಾರೆ. 40ರ ವಯಸ್ಸಿನ ಟೇಲರ್ 2004ರಲ್ಲಿ ಚೊಚ್ಚಲ ಏಕದಿನ ಪಂದ್ಯವನ್ನಾಡಿದ ನಂತರ ಈ ತನಕ 207 ಪಂದ್ಯಗಳಲ್ಲಿ 11 ಶತಕಗಳು ಹಾಗೂ 39 ಅರ್ಧಶತಕಗಳ ಸಹಿತ ಒಟ್ಟು 6,704 ರನ್ ಗಳಿಸಿದ್ದಾರೆ.
ಟೇಲರ್ ಮೊದಲಿಗೆ 2021ರಲ್ಲಿ ಅಂತರ್ರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದರು. ಆದರೆ 2022ರಲ್ಲಿ ಐಸಿಸಿ ಭ್ರಷ್ಟಾಚಾರ ನಿಗ್ರಹ ಘಟಕ ಹಾಗೂ ಡೋಪಿಂಗ್ ವಿರೋಧಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಮೂರೂವರೆ ವರ್ಷಗಳ ಕಾಲ ನಿಷೇಧಕ್ಕೆ ಒಳಗಾಗಿದ್ದರು.
ತನ್ನ ಮೇಲಿನ ನಿಷೇಧದ ಅವಧಿ ಪೂರ್ಣಗೊಳಿಸಿದ ನಂತರ ಟೇಲರ್ 2025ರಲ್ಲಿ ನಿವೃತ್ತಿಯ ನಿರ್ಧಾರದಿಂದ ಹಿಂದೆ ಸರಿದಿದ್ದರು. ಮುಂದಿನ ವರ್ಷ ದಕ್ಷಿಣ ಆಫ್ರಿಕಾ ಹಾಗೂ ನಮೀಬಿಯಾದೊಂದಿಗೆ ಏಕದಿನ ವಿಶ್ವಕಪ್ ಆತಿಥ್ಯವಹಿಸುತ್ತಿರುವ ಝಿಂಬಾಬ್ವೆ ತಂಡವನ್ನು ಮತ್ತೊಮ್ಮೆ ಪ್ರತಿನಿಧಿಸಲು ಸಜ್ಜಾಗುತ್ತಿದ್ದಾರೆ.






