ಬುಮ್ರಾ ವಿರುದ್ದ ‘ಬೇಝ್ಬಾಲ್’ ಕ್ರಿಕೆಟ್ ರಣನೀತಿ ಪ್ರಯೋಗಿಸಲು ಇಂಗ್ಲೆಂಡ್ ಯೋಜನೆ

ಜಸ್ಪ್ರಿತ್ ಬುಮ್ರಾ | PC : PTI
ಲಂಡನ್: ಮುಂಬರುವ ಸ್ವದೇಶದಲ್ಲಿ ನಡೆಯಲಿರುವ ಭಾರತ ತಂಡದ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡವು ಮಹತ್ವದ ಸವಾಲು ಎದುರಿಸಲಿದೆ. ನಾಯಕ ಬೆನ್ ಸ್ಟೋಕ್ಸ್ ಹಾಗೂ ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ಮಾರ್ಗದರ್ಶನದಲ್ಲಿ ಪ್ರಮುಖವಾಗಿ ಭಾರತದ ಸ್ಟಾರ್ ಬೌಲರ್ ಜಸ್ಪ್ರಿತ್ ಬುಮ್ರಾ ವಿರುದ್ಧ ‘ಬೇಝ್ಬಾಲ್’ ಕ್ರಿಕೆಟ್ ರಣತಂತ್ರವನ್ನು ಪ್ರಯೋಗಿಸಲು ಸಜ್ಜಾಗಿದೆ.
ಬೇಝ್ಬಾಲ್ ಕ್ರಿಕೆಟ್ ರಣನೀತಿಯ ಮೂಲಕ ಇಂಗ್ಲೆಂಡ್ ತಂಡವು ಸ್ವದೇಶದಲ್ಲಿ ಭಾರೀ ಯಶಸ್ಸು ಕಂಡಿದ್ದರೆ, ವಿದೇಶಿ ಪಂದ್ಯಗಳಲ್ಲಿ ಗೆಲುವು ಹಾಗೂ ಹಿನ್ನಡೆ ಎರಡನ್ನೂ ಅನುಭವಿಸಿದೆ.
ಬೇಝ್ಬಾಲ್ ಯುಗವು ಇಂಗ್ಲೆಂಡ್ ಕ್ರಿಕೆಟ್ ಫಿಲಾಸಫಿಯನ್ನು ಪರಿವರ್ತಿಸಿದೆ. ಬೌಲರ್ಗಳು ಸೇರಿದಂತೆ ಎಲ್ಲ ಕ್ರಮಾಂಕದ ಆಟಗಾರರು ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯನ್ನು ಅಳವಡಿಸಿಕೊಂಡಿದ್ದಾರೆ. ಸವಾಲಿನ ಸಂದರ್ಭದಲ್ಲೂ ಸ್ಪರ್ಧಾತ್ಮಕ ಪ್ರದರ್ಶನಗಳನ್ನು ಕಾಯ್ದುಕೊಂಡಿದ್ದಾರೆ.
ಇಂಗ್ಲೆಂಡ್ ಕ್ರಿಕೆಟ್ ತಂಡವು ಸ್ಟೋಕ್ಸ್ ಹಾಗೂ ಮೆಕಲಮ್ ನಾಯಕತ್ವದಲ್ಲಿ ಸ್ವದೇಶದಲ್ಲಿ 20 ಟೆಸ್ಟ್ ಪಂದ್ಯಗಳ ಪೈಕಿ 15ರಲ್ಲಿ ಜಯ ಸಾಧಿಸಿದೆ. ಇಂಗ್ಲೆಂಡ್ ತಂಡವು ಸ್ವದೇಶದಲ್ಲಿ ಕೇವಲ 4ರಲ್ಲಿ ಸೋಲು ಹಾಗೂ ಒಂದರಲ್ಲಿ ಡ್ರಾ ಸಾಧಿಸಿದೆ.
2022ರ ಜೂನ್ನಿಂದ ಸ್ವದೇಶದಲ್ಲಿ ಇಂಗ್ಲೆಂಡ್ನ ಗೆಲುವಿನ ಶೇಕಡಾವಾರು 75ರಷ್ಟಿದೆ. ದಕ್ಷಿಣ ಆಫ್ರಿಕಾ( ಶೇ.87.5 )ನಂತರ 2ನೇ ಸ್ಥಾನದಲ್ಲಿದೆ.
2022ರಲ್ಲಿ ಭಾರತ ವಿರುದ್ಧ ಎಜ್ಬಾಸ್ಟನ್ ಟೆಸ್ಟ್ ಪಂದ್ಯವನ್ನು ಜಯಿಸಿ ಸರಣಿಯನ್ನು 2-2ರಿಂದ ಡ್ರಾಗೊಳಿಸಿದ್ದ ಇಂಗ್ಲೆಂಡ್ ತಂಡವು 2023ರ ಆ್ಯಶಸ್ ಸರಣಿಯಲ್ಲಿ ಆಕ್ರಮಣಕಾರಿ ಹಾಗೂ ಫಲಿತಾಂಶ ಆಧರಿತ ಕ್ರಿಕೆಟ್ ತಂತ್ರದ ಮೂಲಕ ಮಿಂಚಿತ್ತು.
ಸ್ವದೇಶದಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ತಂತ್ರವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವುದು ಜೋ ರೂಟ್, ಓಲಿ ಪೋಪ್, ಝಾಕ್ ಕ್ರಾವ್ಲೇ, ಬೆನ್ ಡಕೆಟ್ ಹಾಗೂ ಬೆನ್ ಸ್ಟೋಕ್ಸ್ ಅವರ ಬ್ಯಾಟಿಂಗ್ ಅಂಕಿ-ಅಂಶಗಳಿಂದ ಗೊತ್ತಾಗುತ್ತಿದೆ.
ಭಾರತ ತಂಡವು ತವರಿನಲ್ಲಿ ಇಂಗ್ಲೆಂಡ್ ತಂಡದ ಪ್ರಾಬಲ್ಯನ್ನು ಮುರಿದು, ಐತಿಹಾಸಿಕ ಸರಣಿಯನ್ನು ಜಯಿಸಲಿದೆಯೇ ಎಂಬುದನ್ನು ಮುಂಬರುವ ಟೆಸ್ಟ್ ಸರಣಿಯಲ್ಲಿ ನಿರ್ಧಾರವಾಗಲಿದೆ.
*ಬ್ಯಾಟಿಂಗ್ ಅಂಕಿ-ಅಂಶ
ಹೊಸ ನಾಯಕತ್ವದಡಿಯಲ್ಲಿ ಸ್ವದೇಶದಲ್ಲಿ ಇಂಗ್ಲೆಂಡ್ನ ಬ್ಯಾಟಿಂಗ್ ಪ್ರದರ್ಶನ ಅಮೋಘವಾಗಿದೆ.
ಇಂಗ್ಲೆಂಡ್ನ ಅಗ್ರ-7 ಬ್ಯಾಟರ್ಗಳು 43.86ರ ಸರಾಸರಿಯನ್ನು ಹೊಂದಿದ್ದು, ಶ್ರೀಲಂಕಾಕ್ಕಿಂತ(44.39)ಸ್ವಲ್ಪ ಹಿಂದಿದ್ದಾರೆ.
ಜಾಗತಿಕವಾಗಿ ಅಗ್ರ-7 ಬ್ಯಾಟರ್ಗಳ ಪೈಕಿ ಇಂಗ್ಲೆಂಡ್ನ ಬ್ಯಾಟರ್ಗಳು 73.90 ಸ್ಟ್ರೈಕ್ರೇಟ್ ಹೊಂದಿದ್ದಾರೆ. ಇಂಗ್ಲೆಂಡ್ನ ನಂತರ ಭಾರತವು(60.88)ಸ್ಟ್ರೈಕ್ರೇಟ್ನಲ್ಲಿ 2ನೇ ಸ್ಥಾನದಲ್ಲಿದೆ.
*ಸ್ಥಿರ ಪ್ರದರ್ಶನ ನೀಡುತ್ತಿರುವ ಇಂಗ್ಲೆಂಡ್ನ ಪ್ರಮುಖ ಆಟಗಾರರು
ಜೋ ರೂಟ್: 20 ಟೆಸ್ಟ್ ಪಂದ್ಯಗಳಲ್ಲಿ, 63.67ರ ಸರಾಸರಿಯಲ್ಲಿ, 7 ಶತಕ, 7 ಅರ್ಧಶತಕಗಳ ಸಹಿತ 1,783 ರನ್
ಓಲಿ ಪೋಪ್: 17 ಟೆಸ್ಟ್ ಪಂದ್ಯಗಳಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 48.28ರ ಸರಾಸರಿಯಲ್ಲಿ 5 ಶತಕ, 5 ಅರ್ಧಶತಕಗಳ ಸಹಿತ 1,352 ರನ್.
ಝಾಕ್ ಕ್ರಾವ್ಲೇ: 17 ಟೆಸ್ಟ್ ಪಂದ್ಯಗಳಲ್ಲಿ 38.70ರ ಸರಾಸರಿಯಲ್ಲಿ 2 ಶತಕ ಹಾಗೂ 5 ಅರ್ಧಶತಕ ಗಳ ಸಹಿತ 1,045 ರನ್
ಬೆನ್ ಡಕೆಟ್: 13 ಟೆಸ್ಟ್ ಪಂದ್ಯಗಳಲ್ಲಿ 47.95ರ ಸರಾಸರಿಯಲ್ಲಿ 2 ಶತಕ, 5 ಅರ್ಧಶತಕಗಳ ಸಹಿತ 1,007 ರನ್
ಬೆನ್ ಸ್ಟೋಕ್ಸ್(ನಾಯಕ): 17 ಟೆಸ್ಟ್ ಪಂದ್ಯಗಳಲ್ಲಿ 42.34ರ ಸರಾಸರಿಯಲ್ಲಿ 2 ಶತಕ, 7 ಅರ್ಧಶತಕಗಳ ಸಹಿತ 974 ರನ್.







