ಉಸ್ಮಾನ್ ತಾರಿಕ್ನಂತೆ ಬೂಮ್ರಾ ವಿಶಿಷ್ಟ ಬೌಲರ್: ಪಾಕ್ ಮಾಜಿ ಕ್ರಿಕೆಟಿಗ ಶ್ಲಾಘನೆ

PC: screengrab/x.com/GGurtej
ಕರಾಚಿ: ಭಾರತ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ, ವೇಗದ ಬೌಲರ್ ಉಸ್ಮಾನ್ ತಾರಿಕ್ ಇದ್ದಂತೆ ಎಂದು ಪಾಕಿಸ್ತಾನ ಕ್ರಿಕೆಟ್ ಆಯ್ಕೆಗಾರ ಅಕೀಬ್ ಜಾವೇದ್ ಶ್ಲಾಘಿಸಿದ್ದಾರೆ. ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಾವೇದ್ ಅವರ ಈ ಹೇಳಿಕೆ ಮಾಧ್ಯಮ ಪ್ರತಿನಿಧಿಗಳಲ್ಲಿ ನಗೆಯ ಅಲೆಗೆ ಕಾರಣವಾಯಿತು.
ಈ ವಿಶ್ವಕಪ್ನಲ್ಲಿ 15 ವಿಕೆಟ್ ಪಡೆದಿರುವ ಬೂಮ್ರಾ, ಈ ಪ್ರತಿಷ್ಠಿತ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಟೂರ್ನಿಯಲ್ಲಿ ಬೌಲಿಂಗ್ ಆಕ್ಷನ್ನಿಂದ ವಿವಾದಕ್ಕೆ ಈಡಾಗಿದ್ದ ಪಾಕಿಸ್ತಾನದ ಸ್ಪಿನ್ನರ್ ತಾರಿಕ್, 5 ಇನ್ನಿಂಗ್ಸ್ಗಳಲ್ಲಿ 10 ವಿಕೆಟ್ ಕಬಳಿಸಿದ್ದರು.
ತಾರಿಕ್ ಅವರಂತೆ ಬೂಮ್ರಾ ಕೂಡ ಸಾಮಾನ್ಯ ಬೌಲರ್ ಅಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಅಭಿಪ್ರಾಯಪಟ್ಟ ಜಾವೇದ್, ಅವರ ಬೌಲಿಂಗ್ ಆಕ್ಷನ್ ಚಾಕಚಕ್ಯತೆಯಿಂದ ಕೂಡಿದೆ ಎಂದು ಬಣ್ಣಿಸಿದರು.
“ಇಂದಿನ ಯುಗದಲ್ಲಿ, ಇಡೀ ವಿಶ್ವಕಪ್ನಲ್ಲಿ ಆ ಬಗೆಯ ಏಕೈಕ ಬೌಲರ್ ಬೂಮ್ರಾ. ಅವರ ಭಿನ್ನತೆಯ ಕಾರಣದಿಂದ ಅವರು ಸಾಮಾನ್ಯ ಬೌಲರ್ ಅಲ್ಲ. ಅವರ ಬೌಲಿಂಗ್ ಆಕ್ಷನ್ ಕೂಡ ಭಿನ್ನ. ಬೌಲಿಂಗ್ಗೆ ಬಂದಾಗ, ಅವರು ವೇಗದ ಬೌಲರ್ಗಳ ಪೈಕಿ ಉಸ್ಮಾನ್ ತಾರಿಕ್ ಇದ್ದಂತೆ ಎಂದು ನಾನು ಸದಾ ಹೇಳುತ್ತೇನೆ. ಅವರು ವಿಶಿಷ್ಟ ಶೈಲಿಯಲ್ಲಿ ವೇಗದ ಬೌಲಿಂಗ್ ಮಾಡುತ್ತಾರೆ. ಬ್ಯಾಟ್ಸ್ಮನ್ಗಳು ಅದರ ವಿರುದ್ಧ ಬ್ಯಾಟಿಂಗ್ ಲಯ ಕಂಡುಕೊಳ್ಳುವುದು ಕಷ್ಟಸಾಧ್ಯ. ಬೂಮ್ರಾ ಅದಕ್ಕೆ ಅವಕಾಶವನ್ನೇ ನೀಡುವುದಿಲ್ಲ,” ಎಂದು ಹೇಳಿದರು.
ಪಾಕಿಸ್ತಾನದ ವೇಗಿಗಳಾದ ವಾಸೀಂ ಅಕ್ರಮ್ ಹಾಗೂ ವಾಕರ್ ಯೂನಸ್ ಅವರಂಥದ್ದೇ ಪ್ರಭಾವವನ್ನು ಬೂಮ್ರಾ ಹೊಂದಿದ್ದಾರೆ ಎಂದು ಅವರು ಗುಣಗಾನ ಮಾಡಿದರು.







