ಫಲಿಸದ ಬೂಮ್ರಾ ಮ್ಯಾಜಿಕ್: ವಿಕೆಟ್ ಬರ ಎದುರಿಸುತ್ತಿರುವ ಖ್ಯಾತ ಬೌಲರ್!

PC: x.com/Newsalarm01
ಹೊಸದಿಲ್ಲಿ: ಪವರ್ ಪ್ಲೇನಲ್ಲಿ ರ್ಯಾಕರ್ಗಳ ಮೂಲಕ ಬ್ಯಾಟ್ಸ್ಮನ್ ಗಳನ್ನು ಕಂಗೆಡಿಸುವ ಮಧ್ಯಮವೇಗಿ ಜಸ್ಪ್ರೀತ್ ಬೂಮ್ರಾ ಪ್ರಸಕ್ತ ಐಪಿಎಲ್ ನಲ್ಲಿ ಐದು ಪಂದ್ಯಗಳಲ್ಲಿ ಯಾವುದೇ ವಿಕೆಟ್ ಗಳಿಸದೇ ಅನಪೇಕ್ಷಿತ ದಾಖಲೆ ನಿರ್ಮಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಪರ ಅಪರೂಪಕ್ಕೆ ಎಂಬಂತೆ ವಿಕೆಟ್ ಬರ ಅನುಭವಿಸುತ್ತಿದ್ದಾರೆ.
2014ರ ಐಪಿಎಲ್ ಸರಣಿಯಲ್ಲಿ ಬೂಮ್ರಾ ಸತತ ನಾಲ್ಕು ಪಂದ್ಯಗಳಲ್ಲಿ ಯಾವುದೇ ವಿಕೆಟ್ ಗಳಿಸಿರಲಿಲ್ಲ. ಆದರೆ ಪ್ರಸಕ್ತ ಋತುವಿನಲ್ಲಿ ಇದು ಸತತ ಐದು ಪಂದ್ಯಗಳಿಗೆ ವಿಸ್ತರಿಸಿದೆ. 2025ರ ಐಪಿಎಲ್ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 4 ಓವರ್ ಗಳಲ್ಲಿ 40 ರನ್ ನೀಡಿ ಯಾವುದೇ ವಿಕೆಟ್ ಪಡೆದಿರಲಿಲ್ಲ. ಬಳಿಕ ಪ್ರಸಕ್ತ ಸರಣಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 4 ಓವರ್ ಗಳಲ್ಲಿ 35 ರನ್ ಬಿಟ್ಟುಕೊಟ್ಟಿದ್ದ ಬೂಮ್ರಾ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 4 ಓವರ್ ಗಳಲ್ಲಿ ಕೇವಲ 21 ರನ್ ನೀಡಿದ್ದರೂ, ವಿಕೆಟ್ ಗಳಿಸಿರಲಿಲ್ಲ. ರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯಗಳಲ್ಲಿ ಬೂಮ್ರಾ ಕ್ರಮವಾಗಿ 32 ಹಾಗೂ 35 ರನ್ ನೀಡಿದ್ದರು.
ಪ್ರಸಕ್ತ ಐಪಿಎಲ್ ನಲ್ಲಿ ಬೂಮ್ರಾ 90 ಎಸೆತಗಳಲ್ಲಿ 123 ರನ್ ನೀಡಿದ್ದು, ಯಾವುದೇ ವಿಕೆಟ್ ಪಡೆದಿಲ್ಲ. ಎಕಾನಮಿ ದರ 8.20 ಆಗಿದ್ದು, ಇದರಿಂದ ಬೂಮ್ರಾಗೆ ಇದ್ದ ಸ್ಟ್ರೈಕ್ ಬೌಲರ್ ಎಂಬ ಬಿರುದಿಗೆ ಧಕ್ಕೆ ಉಂಟಾದಂತಾಗಿದೆ. ಆರ್ಸಿಬಿ ವಿರುದ್ಧ ರವಿವಾರ ನಡೆದ ಪಂದ್ಯದಲ್ಲಿ ಬೂಮ್ರಾ ದಾಳಿಯ ಮುಂಚೂಣಿಯಲ್ಲಿ ಇರುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಆರ್ಸಿಬಿ ಬ್ಯಾಟ್ಸ್ಮನ್ ಗಳು ಪ್ರಾಬಲ್ಯ ಮೆರೆದರು. 4 ವಿಕೆಟ್ ನಷ್ಟಕ್ಕೆ 240 ರನ್ ಗಳ ಬೃಹತ್ ಮೊತ್ತವನ್ನು ಆರ್ಸಿಬಿ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಮುಂಬೈ ಇಂಡಿಯನ್ಸ್ 222 ರನ್ ಗಳನ್ನು ಗಳಿಸಿ ಸೋಲೊಪ್ಪಿಕೊಂಡರು. ಆದಾಗ್ಯೂ ಐಪಿಎಲ್ ನಲ್ಲಿ 149 ಪಂದ್ಯಗಳಲ್ಲಿ 183 ವಿಕೆಟ್ ಗಳಿಸಿದ ದಾಖಲೆಯನ್ನು ಬೂಮ್ರಾ ಹೊಂದಿದ್ದಾರೆ.







