ಬಿಡಬ್ಲ್ಯುಎಫ್ ಬ್ಯಾಡ್ಮಿಂಟನ್ ಪ್ಯಾರಾ ವಿಶ್ವ ಚಾಂಪಿಯನ್ಶಿಪ್ಸ್; ಪ್ರಮೋದ್ ಭಗತ್ಗೆ ಎಸ್ಎಲ್3 ಚಿನ್ನ

Photo: PTI
ಮನಾಮ, ಫೆ. 14: ಬಹ್ರೈನ್ ರಾಜಧಾನಿ ಮನಾಮದಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ಬ್ಯಾಡ್ಮಿಂಟನ್ ಪ್ಯಾರಾ ವಿಶ್ವ ಚಾಂಪಿಯನ್ಶಿಪ್ಸ್ನಲ್ಲಿ ಶನಿವಾರ ಭಾರತದ ಪ್ರಮೋದ್ ಭಗತ್ ಅವರು ಎಸ್ಎಲ್3 ವಿಭಾಗದಲ್ಲಿ ಇಂಡೋನೇಶ್ಯದ ಮುಹಮ್ಮದ್ ಅಲಿ ಇಮ್ರಾನ್ ಅವರನ್ನು ಸೋಲಿಸಿ ಚಿನ್ನದ ಪದಕ ಗೆದ್ದಿದ್ದಾರೆ.
37 ವರ್ಷದ ಭಗತ್ ಫೈನಲ್ನಲ್ಲಿ ತನ್ನ ಎದುರಾಳಿಯನ್ನು 21–12, 21–18 ಗೇಮ್ಗಳಿಂದ ಸೋಲಿಸಿದರು. ಇದು ವಿಶ್ವ ಚಾಂಪಿಯನ್ಶಿಪ್ನಲ್ಲಿ ಅವರ ನಾಲ್ಕನೇ ಸತತ ಸಿಂಗಲ್ಸ್ ಚಿನ್ನವಾಗಿದ್ದು, ಒಟ್ಟಾರೆ ಈ ವಿಭಾಗದಲ್ಲಿ ಆರನೇ ಜಾಗತಿಕ ಪ್ರಶಸ್ತಿಯಾಗಿದೆ.
ಎಸ್ಎಲ್3 ವಿಭಾಗದಲ್ಲಿ ಕಾಲುಗಳ ಅಸಮತೋಲನವಿರುವ ಹಾಗೂ ನಿಂತು ಆಡುವ ಆಟಗಾರರು ಇರುತ್ತಾರೆ. ಐದು ವರ್ಷದವರಿದ್ದಾಗ ಭಗತ್ ಅವರನ್ನು ಪೋಲಿಯೋ ಕಾಡಿತ್ತು.
ಅವರು 2009, 2015, 2019, 2022 ಮತ್ತು 2024ರಲ್ಲಿ ಸಿಂಗಲ್ಸ್ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
ಬ್ಯಾಡ್ಮಿಂಟನ್ ವಿಶ್ವ ಫೆಡರೇಶನ್ನ (ಬಿಡಬ್ಲ್ಯುಎಫ್) ಉದ್ದೀಪನ ದ್ರವ್ಯ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಅವರಿಗೆ 18 ತಿಂಗಳ ನಿಷೇಧವನ್ನೂ ವಿಧಿಸಲಾಗಿತ್ತು. ಅದರಿಂದಾಗಿ 2024ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಸ್ಪರ್ಧಿಸಲು ಅವರಿಗೆ ಸಾಧ್ಯವಾಗಿರಲಿಲ್ಲ.
ಬಳಿಕ ನಡೆದ ಡಬಲ್ಸ್ನಲ್ಲಿ ಅವರು ಸುಕಾಂತ್ ಕದಮ್ ಜೊತೆಗೆ ಆಡಿ ಎಸ್ಎಲ್3–ಎಸ್ಎಲ್4 ವಿಭಾಗದ ಚಿನ್ನ ಗೆದ್ದರು. ಫೈನಲ್ನಲ್ಲಿ ಭಾರತದವರೇ ಆದ ಜೆ. ದಿಲ್ಲಿ ಮತ್ತು ಎನ್. ಶಿವಕುಮಾರ್ ಅವರನ್ನು 21–19, 21–16 ಗೇಮ್ಗಳಿಂದ ಮಣಿಸಿದರು.
ಇದು ಭಗತ್ ಅವರ ಎರಡನೇ ಡಬಲ್ಸ್ ಚಿನ್ನವಾಗಿದೆ.






