BWF World Championships | ಆಯುಷ್ ಶೆಟ್ಟಿಯ ಭವ್ಯ ಅಭಿಯಾನ ಅಂತ್ಯ; ಸಿಂಧುಗೆ ಸೋಲು

ಪಿ.ವಿ. ಸಿಂಧು | Photo Credit : PTI
ಹೊಸದಿಲ್ಲಿ, ಆ. 20: ಹೊಸದಿಲ್ಲಿಯಲ್ಲಿ ನಡೆಯುತ್ತಿರುವ BWF ವಿಶ್ವ ಚಾಂಪಿಯನ್ಶಿಪ್ಸ್ ಪಂದ್ಯಾವಳಿಯಲ್ಲಿ ಭಾರತದ ಆಯುಷ್ ಶೆಟ್ಟಿಯ ಅಮೋಘ ಅಭಿಯಾನ ಗುರುವಾರ ಕೊನೆಗೊಂಡಿದೆ. ಅದೇ ವೇಳೆ, ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಪಿ.ವಿ. ಸಿಂಧು ಕೂಡ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ.
ಮೊದಲ ಸುತ್ತಿನಲ್ಲಿ ಹಾಲಿ ಚಾಂಪಿಯನ್ ಹಾಗೂ ಅಗ್ರ ಶ್ರೇಯಾಂಕದ ಚೀನಾದ ಶಿ ಯು ಕಿಯನ್ನು ಮಣಿಸಿ ಕ್ರೀಡಾ ಜಗತ್ತಿನ ಗಮನ ಸೆಳೆದಿದ್ದ ಆಯುಷ್, ಗುರುವಾರ ನಡೆದ ಪ್ರಿ-ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಇಂಡೋನೇಷ್ಯಾದ ಅಲ್ವಿ ಫರ್ಹಾನ್ ವಿರುದ್ಧ 19-21, 11-21 ಗೇಮ್ಗಳಿಂದ ಪರಾಭವಗೊಂಡರು.
ಮೊದಲ ಗೇಮ್ ಅತ್ಯಂತ ರೋಚಕವಾಗಿ ಸಾಗಿ, ಇಬ್ಬರೂ ಆಟಗಾರರು ಸಮಬಲದ ಹೋರಾಟ ನೀಡಿದರು. ವಿರಾಮದ ವೇಳೆಗೆ ಫರ್ಹಾನ್ 11-9 ಅಂಕಗಳ ಅಲ್ಪ ಮುನ್ನಡೆ ಕಾಯ್ದುಕೊಂಡಿದ್ದರು. ವಿರಾಮದ ನಂತರವೂ ಪಂದ್ಯ ತೀವ್ರ ಜಿದ್ದಾಜಿದ್ದಿನಿಂದ ಕೂಡಿತ್ತು.
ಆ ಬಳಿಕ ಇಂಡೋನೇಷ್ಯಾದ ಆಟಗಾರ ಮುನ್ನುಗ್ಗಿ 18-14 ಅಂಕಗಳ ಮುನ್ನಡೆ ಸಾಧಿಸಿದರು. ಆದರೆ, ಅಮೋಘ ಪ್ರತಿಹೋರಾಟ ನೀಡಿದ ಆಯುಷ್ ಸತತ ಐದು ಅಂಕಗಳನ್ನು ಗಳಿಸಿ 19-18ರಿಂದ ಮುನ್ನಡೆ ಪಡೆದರು. ನಿರ್ಣಾಯಕ ಹಂತದಲ್ಲಿ ಶಾಂತಚಿತ್ತತೆ ಕಾಯ್ದುಕೊಂಡ ಫರ್ಹಾನ್ ಮತ್ತೆ ಮುನ್ನಡೆ ಸಾಧಿಸಿ ಮೊದಲ ಗೇಮ್ ಅನ್ನು 21-19 ಅಂತರದಿಂದ ಗೆದ್ದುಕೊಂಡರು.
ಎರಡನೇ ಗೇಮ್ನಲ್ಲೂ ತನ್ನ ಲಯವನ್ನು ಮುಂದುವರಿಸಿದ ಫರ್ಹಾನ್, ಆರಂಭದಲ್ಲೇ 3-1 ಅಂಕಗಳ ಮುನ್ನಡೆ ಪಡೆದರು. ಮೊದಲಾರ್ಧದಲ್ಲಿ ಇಬ್ಬರೂ ಆಟಗಾರರ ನಡುವೆ ಬಿರುಸಿನ ವಿನಿಮಯಗಳು ನಡೆದವು. ಆದರೂ, ಈ ಮುಖಾಮುಖಿಯಲ್ಲಿ ಮೇಲುಗೈ ಸಾಧಿಸಿದ ಫರ್ಹಾನ್ ವಿರಾಮದ ಹೊತ್ತಿಗೆ 11-6 ಅಂಕಗಳ ಮುನ್ನಡೆ ಸಾಧಿಸಿದರು.
ಆ ಬಳಿಕ ಆಯುಷ್ಗೆ ಪ್ರತಿಹೋರಾಟ ನೀಡಲು ಯಾವುದೇ ಅವಕಾಶ ನೀಡದ ಫರ್ಹಾನ್, 21-11ರಿಂದ ಗೇಮ್ ಜಯಿಸಿದರು.
► ಪಿ.ವಿ. ಸಿಂಧುಗೆ ಸೋಲು
ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಿ-ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಭಾರತದ ಪಿ.ವಿ. ಸಿಂಧು ಮೂರನೇ ಶ್ರೇಯಾಂಕದ ಚೀನಾದ ವಾಂಗ್ ಝಿ ಯಿ ವಿರುದ್ಧ 21-11, 15-21, 21-17 ಗೇಮ್ಗಳಿಂದ ಸೋತು ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ.
ವಿಶ್ವ ಚಾಂಪಿಯನ್ಶಿಪ್ಸ್ ಇತಿಹಾಸದಲ್ಲಿ ಚೀನಾ ಆಟಗಾರ್ತಿಯ ವಿರುದ್ಧ ಸಿಂಧು ಕಂಡ ಮೊದಲ ಸೋಲು ಇದಾಗಿದ್ದು, ಸತತ ಎಂಟು ಪಂದ್ಯಗಳ ಅವರ ಗೆಲುವಿನ ಓಟಕ್ಕೆ ತೆರೆ ಬಿದ್ದಿದೆ.
ಮೊದಲ ಗೇಮ್ನಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ವಾಂಗ್, 7-7 ಸಮಬಲದ ನಂತರ ಸಿಂಧು ವಿರುದ್ಧ ನಿರಂತರ ಮುನ್ನಡೆ ಕಾಯ್ದುಕೊಂಡು ಅರ್ಹ ಗೆಲುವು ದಾಖಲಿಸಿದರು.
ವಿರಾಮದ ನಂತರ ನವೋಲ್ಲಾಸದಿಂದ ಕಣಕ್ಕಿಳಿದ ಸಿಂಧು, ಎರಡನೇ ಗೇಮ್ನ ಆರಂಭದಲ್ಲೇ ಮುನ್ನಡೆ ಪಡೆದರು ಹಾಗೂ ಅಂತಿಮವಾಗಿ ಆ ಗೇಮನ್ನು ಗೆದ್ದರು.
ಮೂರನೇ ಗೇಮ್ನಲ್ಲಿ ಇಬ್ಬರೂ ಆಟಗಾರ್ತಿಯರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತು. ಸ್ನಾಯು ಸೆಳೆತದಿಂದ ಬಳಲುತ್ತಿದ್ದರೂ ವಾಂಗ್ ದಿಟ್ಟ ಪ್ರತಿರೋಧ ತೋರಿದರು. ಸ್ಕೋರ್ 18-17 ಇದ್ದಾಗ ಇಬ್ಬರ ನಡುವೆ ಬರೋಬ್ಬರಿ 54 ಶಾಟ್ಗಳ ಮಹಾ ರ್ಯಾಲಿ ನಡೆಯಿತು. ಆ ನಿರ್ಣಾಯಕ ಹಂತದ ನಂತರ ಚೇತರಿಸಿಕೊಳ್ಳಲು ಸಿಂಧು ವಿಫಲರಾದರು ಹಾಗೂ ವಾಂಗ್ ಸ್ಮರಣೀಯ ಜಯ ದಾಖಲಿಸಿದರು.
ಕ್ವಾರ್ಟರ್ಫೈನಲ್ನಲ್ಲಿ ವಾಂಗ್ ಡೆನ್ಮಾರ್ಕ್ನ ಲೈನ್ ಕ್ರಿಸ್ಟೋಫರ್ಸನ್ ಅವರನ್ನು ಎದುರಿಸಲಿದ್ದಾರೆ.






