BWF World Championship | ಕ್ವಾರ್ಟರ್ ಫೈನಲ್ನಲ್ಲಿ ಎಡವಿದ ಸಾತ್ವಿಕ್-ಚಿರಾಗ್ ಶೆಟ್ಟಿ

ಸಾತ್ವಿಕ್ , ಚಿರಾಗ್ | Photo Credit : PTI
ಹೊಸದಿಲ್ಲಿ: ಭಾರತದ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಚೀನಾದ ಲಿಯಾಂಗ್ ವೀ ಕೆಂಗ್ ಹಾಗೂ ವಾಂಗ್ ಚಾಂಗ್ ವಿರುದ್ಧ ನೇರ ಗೇಮ್ಗಳ ಅಂತರದಿಂದ ಸೋಲನುಭವಿಸಿ ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ಶಿಪ್ನಿಂದ ನಿರ್ಗಮಿಸಿದ್ದಾರೆ. ಈ ಮೂಲಕ ಭಾರತಕ್ಕೆ ಮತ್ತೊಂದು ಪದಕ ಕೈತಪ್ಪಿದೆ.
ಶುಕ್ರವಾರ ಏಕಪಕ್ಷೀಯವಾಗಿ ಸಾಗಿದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತೀಯ ಜೋಡಿ 18-21, 9-21 ಗೇಮ್ಗಳ ಅಂತರದಿಂದ ಸೋಲುಂಡಿತು.
ಒಂದು ಹಂತದಲ್ಲಿ 14-12ರಿಂದ ಮುನ್ನಡೆ ಪಡೆದ ಹೊರತಾಗಿಯೂ ಸಾತ್ವಿಕ್ ಹಾಗೂ ಚಿರಾಗ್ ಮೊದಲ ಗೇಮ್ ಅನ್ನು 18-21 ಅಂತರದಿಂದ ಕಳೆದುಕೊಂಡಿತು.
ಚೀನಾದ ಲಿಯಾಂಗ್ ಹಾಗೂ ವಾಂಗ್ ಎರಡನೇ ಗೇಮ್ನಲ್ಲಿ ಕ್ಷಿಪ್ರವಾಗಿ ಭಾರತೀಯ ಜೋಡಿಯನ್ನು ಒತ್ತಡಕ್ಕೆ ಸಿಲುಕಿಸಿದರು. ಸಾತ್ವಿಕ್ ಹಾಗೂ ಚಿರಾಗ್ 8-15ರಿಂದ ಹಿನ್ನಡೆ ಅನುಭವಿಸಿದರು. ಆಗ ಚೀನಾದ ಜೋಡಿ ಸಂಪೂರ್ಣ ಹಿಡಿತ ಸಾಧಿಸಿತು. ಲಿಯಾಂಗ್ ಹಾಗೂ ವಾಂಗ್ ಅಂತಿಮವಾಗಿ ಎರಡನೇ ಗೇಮ್ ಅನ್ನು 21-9 ಅಂತರದಿಂದ ಸುಲಭವಾಗಿ ಗೆದ್ದುಕೊಂಡು ಸೆಮಿ ಫೈನಲ್ಗೆ ಲಗ್ಗೆ ಇಟ್ಟಿದೆ. ಇದರೊಂದಿಗೆ ಸಾತ್ವಿಕ್ ಹಾಗೂ ಚಿರಾಗ್ ಅಭಿಯಾನ ಅಂತ್ಯವಾಗಿದೆ.
ಸಾತ್ವಿಕ್ ಹಾಗೂ ಚಿರಾಗ್ ಸೋತ ಕಾರಣ ಭಾರತವು ಪುರುಷರ ಡಬಲ್ಸ್ ಸ್ಪರ್ಧೆಯಲ್ಲಿ ಎರಡನೇ ಪದಕ ಗೆಲ್ಲುವ ಕನಸು ಭಗ್ನವಾಯಿತು. ಸಾತ್ವಿಕ್ ಹಾಗೂ ಚಿರಾಗ್ ಕ್ವಾರ್ಟರ್ ಫೈನಲ್ಗಿಂತ ಮೊದಲು ಲಿಯಾಂಗ್ ಹಾಗೂ ವಾಂಗ್ ವಿರುದ್ಧ ಆಡಿರುವ 13 ಪಂದ್ಯಗಳ ಪೈಕಿ ಕೇವಲ ನಾಲ್ಕರಲ್ಲಿ ಜಯ ಸಾಧಿಸಿದ್ದರು.
ಟ್ರೀಸಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್ ಮಾತ್ರ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಪದಕ ಖಚಿತಪಡಿಸಿದ್ದಾರೆ. ಟ್ರೀಸಾ ಹಾಗೂ ಗಾಯತ್ರಿ ಸೆಮಿ ಫೈನಲ್ನಲ್ಲಿ ಚೀನಾದ ಅಗ್ರ ಶ್ರೇಯಾಂಕದ ಲಿಯು ಶೆಂಗ್ ಶು ಹಾಗೂ ಟಾನ್ ನಿಂಗ್ರನ್ನು ಎದುರಿಸಲಿದ್ದಾರೆ.






