ಬಿಡಬ್ಲ್ಯುಎಫ್ ವರ್ಲ್ಡ್ ಜೂನಿಯರ್ ಚಾಂಪಿಯನ್ ಶಿಪ್ | ತನ್ವಿ ಶರ್ಮಾ ಫೈನಲ್ ಗೆ, ಐತಿಹಾಸಿಕ ಪದಕ ಖಚಿತ

ತನ್ವಿ ಶರ್ಮಾ | Photo Credit : olympics.com
ಹೊಸದಿಲ್ಲಿ, ಅ.18: ಗುವಾಹಟಿಯ ನ್ಯಾಶನಲ್ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವರ್ಲ್ಡ್ ಜೂನಿಯರ್ ಚಾಂಪಿಯನ್ ಶಿಪ್ನಿಂದ ಪದಕದೊಂದಿಗೆ ನಿರ್ಗಮಿಸುವುದನ್ನು ಖಚಿತಪಡಿಸಿದ ಮರು ದಿನವೇ ತನ್ವಿ ಶರ್ಮಾ ಅವರು ಕನಿಷ್ಠ ಬೆಳ್ಳಿ ಪದಕವನ್ನು ದೃಢಪಡಿಸಿದ್ದಾರೆ.
ಶನಿವಾರ ನಡೆದ ಬಾಲಕಿಯರ ಸಿಂಗಲ್ಸ್ ವಿಭಾಗದ ಸೆಮಿ ಫೈನಲ್ ನಲ್ಲಿ ತನ್ವಿ ಅವರು ಚೀನಾದ ಲಿಯು ಸಿ ಯಾರನ್ನು 15-11, 15-9 ಗೇಮ್ ಗಳ ಅಂತರದಿಂದ ಮಣಿಸುವ ಮೂಲಕ ಚಿನ್ನದ ಪದಕಕ್ಕಾಗಿ ನಡೆಯಲಿರುವ ಪಂದ್ಯದಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ತನ್ವಿಗಿಂತ ಮೊದಲು ಕೇವಲ ಇಬ್ಬರು ಭಾರತೀಯರಾದ-ಅಪರ್ಣಾ ಪೋಪಟ್(1996) ಹಾಗೂ ಸೈನಾ ನೆಹ್ವಾಲ್(2006,2008)ಅವರು ಪಂದ್ಯಾವಳಿಯಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ಗೆ ತಲುಪಿದ್ದರು. ಪೋಪಟ್ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದರೆ, ನೆಹ್ವಾಲ್ 2006ರಲ್ಲಿ ಬೆಳ್ಳಿ ಹಾಗೂ 2008ರಲ್ಲಿ ಚಿನ್ನದ ಪದಕ ಜಯಿಸಿದ್ದರು.
ಒಟ್ಟಾರೆ ತನ್ವಿ ಅವರು ಬಿಡಬ್ಲ್ಯುಎಫ್ ವರ್ಲ್ಡ್ ಜೂನಿಯರ್ ಚಾಂಪಿಯನ್ ಶಿಪ್ ನಲ್ಲಿ ಫೈನಲ್ಸ್ಗೆ ತಲುಪಿದ ಭಾರತದ ಐದನೇ ಬ್ಯಾಡ್ಮಿಂಟನ್ ಸ್ಟಾರ್ ಆಗಿದ್ದಾರೆ. ಪೋಪಟ್(1996), ನೆಹ್ವಾಲ್(2006,2008), ಸಿರಿಲ್ ವರ್ಮಾ(2015)ಹಾಗೂ ಶಂಕರ್ ಮುತ್ತುಸ್ವಾಮಿ((2002)ಈ ಸಾಧನೆ ಮಾಡಿದ್ದಾರೆ.
16ರ ವಯಸ್ಸಿನ ತನ್ವಿ ಶರ್ಮಾ ಫೈನಲ್ ಪಂದ್ಯದಲ್ಲಿ ಥಾಯ್ಲೆಂಡ್ ನ ಅನ್ಯಪತ್ ಫಿಚಿತ್ಪ್ರೀಚಾಸಕ್ ರನ್ನು ಎದುರಿಸಲಿದ್ದಾರೆ. ಅನ್ಯಪತ್ ಮತ್ತೊಂದು ಸೆಮಿ ಫೈನಲ್ ಪಂದ್ಯದಲ್ಲಿ ತಮ್ಮದೇ ದೇಶದ ಯಾಟವೀಮಿನ್ ಕೆಟ್ಕ್ಲಿಯೆಂಗ್ರನ್ನು 10-15, 15-11, 15-5 ಗೇಮ್ ಗಳ ಅಂತರದಿಂದ ಮಣಿಸಿದರು.
ಅಗ್ರ ಶ್ರೇಯಾಂಕದ ತನ್ವಿ ಈ ವರ್ಷಾರಂಭದಲ್ಲಿ ಏಶ್ಯನ್ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಜಯಿಸಿದ್ದರು.
ಮತ್ತೊಂದು ಬಾಲಕಿಯರ ಸಿಂಗಲ್ಸ್ ಸ್ಪರ್ಧೆಯಲ್ಲಿ ಪದಕ ಗೆಲ್ಲುವ ಭಾರತದ ಭರವಸೆ ಈಡೇರಲಿಲ್ಲ. 8ನೇ ಶ್ರೇಯಾಂಕದ ಉನ್ನತಿ ಹೂಡಾ ಅವರು ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ನಲ್ಲಿ ಥಾಯ್ಲೆಂಡ್ ನ 2ನೇ ಶ್ರೇಯಾಂಕದ ಫಿಚಿತ್ಪ್ರೀಚಾಸಕ್ ವಿರುದ್ಧ ಸೋತಿದ್ದಾರೆ.
ಶುಕ್ರವಾರ ನಡೆದ ಬಾಲಕರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ನಲ್ಲಿ ಜ್ಞಾನ ದತ್ತು ಚೀನಾದ 3ನೇ ಶ್ರೇಯಾಂಕದ ಲಿಯು ಯಾಂಗ್ ಮಿಂಗ್ ಯು ವಿರುದ್ಧ ಪ್ರಬಲ ಹೋರಾಟ ನೀಡಿದರೂ ಅಂತಿಮವಾಗಿ 11-15, 13-15 ನೇರ ಗೇಮ್ ಗಳ ಅಂತರದಿಂದ ಸೋತಿದ್ದಾರೆ.
ಮಿಕ್ಸೆಡ್ ಡಬಲ್ಸ್ ಜೋಡಿ ಭವ್ಯಾ ಚಾಬ್ರಾ ಹಾಗೂ ವಿಶಾಕಾ ಟೊಪ್ಪೊ ಕೂಡ ಚೈನೀಸ್ ತೈಪೆಯ ಹಂಗ್ ಬಿಂಗ್ ಫು ಹಾಗೂ ಚೌ ಯುನ್ ಅನ್ ಎದುರು ಕ್ವಾರ್ಟರ್ ಫೈನಲ್ ನಲ್ಲಿ 9-15, 7-15 ಅಂತರದಿಂದ ಸುಲಭವಾಗಿ ಸೋತಿದ್ದಾರೆ.







