BWF World Junior Championships | ಕಂಚಿನ ಪದಕ ಗೆದ್ದ ಜಗ್ಶೇರ್ ಸಿಂಗ್ ಖಂಗುರಾ

ಜಗ್ಶೇರ್ ಸಿಂಗ್ ಖಂಗುರಾ | Photo Credit : facebook
ಹೊಸದಿಲ್ಲಿ: ಈಜಿಪ್ಟ್ನ ಕೈರೊದಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವರ್ಲ್ಡ್ ಜೂನಿಯರ್ ಚಾಂಪಿಯನ್ಶಿಪ್ನಲ್ಲಿ ಗುರುವಾರ ಇಂಡೋನೇಶ್ಯದ ರಾಧಿತ್ಯ ವರ್ಧಾನಾ ವಿರುದ್ಧ ಸೆಮಿ ಫೈನಲ್ ಪಂದ್ಯವನ್ನು 6-15, 15-13, 3-15 ಅಂತರದಿಂದ ಸೋತಿರುವ ಜಗ್ಶೇರ್ ಸಿಂಗ್ ಖಂಗುರಾ ಕಂಚಿನ ಪದಕವನ್ನು ದೃಢಪಡಿಸಿದರು.
ಜಗ್ಶೇರ್ ಅವರು ವರ್ಧಾನ ವಿರುದ್ಧ ತೀವ್ರ ಹೋರಾಟ ನೀಡಿದರೂ ಇಂಡೋನೇಶ್ಯದ ಆಟಗಾರನನ್ನು ಮಣಿಸಲು ಸಾಧ್ಯವಾಗಲಿಲ್ಲ. ಮೊದಲ ಗೇಮ್ನಲ್ಲಿ ವರ್ಧಾನ ಪ್ರಾಬಲ್ಯ ಸಾಧಿಸಿದ ನಂತರ ಎರಡನೇ ಗೇಮ್ಅನ್ನು 15-13 ಅಂತರದಿಂದ ಗೆದ್ದುಕೊಂಡ ಜಗ್ಶೇರ್ ಪ್ರತಿರೋಧ ಒಡ್ಡಿದರು. ಆದರೆ ಮೂರನೇ ಗೇಮ್ ಅನ್ನು ಗೆದ್ದುಕೊಂಡ ವರ್ಧಾನ ಫೈನಲ್ಗೆ ಪ್ರವೇಶಿಸಿದರು.
ವೈಯಕ್ತಿಕ ಚಾಂಪಿಯನ್ಶಿಪ್ನಲ್ಲಿ ಭಾರತ ಗೆದ್ದಿರುವ ಏಳನೇ ಕಂಚಿನ ಪದಕ ಇದಾಗಿದೆ. ಒಂದು ಚಿನ್ನ ಹಾಗೂ ಐದು ಬೆಳ್ಳಿ ಪದಕಗಳ ಸಹಿತ ಭಾರತವು ಒಟ್ಟು 13 ಪದಕಗಳನ್ನು ಜಯಿಸಿದೆ.
ಗುರುವಾರ ಚೈನೀಸ್ ತೈಪೆಯ ಯುಯಾನ್ ಜುಯಾಂಗ್ರನ್ನು 6-15, 17-15, 15-12 ಅಂತರದಿಂದ ಮಣಿಸಿದ್ದ ಖಂಗುರಾ ಸೆಮಿ ಫೈನಲ್ಗೆ ತಲುಪಿದ್ದರು.




