FIFA 2026 | ಜೊನಾಥನ್ ಡೇವಿಡ್ ಹ್ಯಾಟ್ರಿಕ್: ಖತರ್ ವಿರುದ್ಧ ಕೆನಡಾ ಗೆ 6-0 ಅಂತರದ ಭರ್ಜರಿ ಗೆಲುವು

Photo credit: X/@FIFAWorldCup
ವ್ಯಾಂಕೋವರ್ : ಜೊನಾಥನ್ ಡೇವಿಡ್ ಅವರ ಹ್ಯಾಟ್ರಿಕ್ ನೆರವಿನಿಂದ ಕೆನಡಾ ತಂಡವು ಖತರ್ ವಿರುದ್ಧ 6-0 ಅಂತರದ ಭರ್ಜರಿ ಜಯ ಗಳಿಸಿದೆ. 2 ಕೆಂಪು ಕಾರ್ಡ್ ಪಡೆದು ಒಂಬತ್ತು ಆಟಗಾರರೊಂದಿಗೆ ಆಡಿದ ಖತರ್ ತಂಡವು ಅತ್ಯಂತ ಕಳಪೆ ಪ್ರದರ್ಶನ ನೀಡಿತು.
ವ್ಯಾಂಕೋವರ್ ನಲ್ಲಿ ನಡೆದ ಪಂದ್ಯದಲ್ಲಿ ಕೆನಡಾ ತಂಡ ಆರಂಭದಿಂದಲೇ ಸಂಪೂರ್ಣ ಪ್ರಾಬಲ್ಯ ಮೆರೆಯಿತು. ಕೈಲ್ ಲಾರಿನ್ ಅವರ ಮೊದಲ ಗೋಲು ಮತ್ತು ಜೊನಾಥನ್ ಡೇವಿಡ್ ಅವರ ಎರಡು ಗೋಲುಗಳ ನೆರವಿನಿಂದ ಕೆನಡಾ ತಂಡವು ಮೊದಲಾರ್ಧದ ಅಂತ್ಯಕ್ಕೆ 3-0 ಅಂತರದ ಮುನ್ನಡೆ ಸಾಧಿಸಿತ್ತು.
ಈ ಅವಧಿಯಲ್ಲಿ, ಖತರ್ ನ ಡಿಫೆಂಡರ್ ಹಮಾಮ್ ಎಲ್ ಅಮಿನ್ ನಡೆಸಿದ ಆಕ್ರಮಣಕಾರಿ ಆಟಕ್ಕೆ ಕೆಂಪು ಕಾರ್ಡ್ ಪಡೆದು ಮೈದಾನದಿಂದ ಹೊರನಡೆಯಬೇಕಾಯಿತು.
ಬಳಿಕ ಅಸ್ಸೀಮ್ ಮದಿಬೊ ಅವರ ಆಕ್ರಮಣಕಾರಿ ಆಟದಿಂದ ಕೆನಡಾದ ಮಿಡ್ ಫೀಲ್ಡರ್ ಇಸ್ಮಾಯಿಲ್ ಕೊನೆ ಗಂಭೀರವಾಗಿ ಗಾಯಗೊಂಡು ಆಮ್ಲಜನಕದ ಸಹಾಯದೊಂದಿಗೆ ಸ್ಟ್ರೆಚರ್ ನಲ್ಲಿ ಮೈದಾನದಿಂದ ಹೊರಕ್ಕೆ ಹೋಗಬೇಕಾಯಿತು. ಅಸ್ಸೀಮ್ ಮದಿಬೊ ನೀಡಲಾದ ಹಳದಿ ಕಾರ್ಡನ್ನು ವಿಎಆರ್ ಪರಿಶೀಲನೆಯ ನಂತರ ರೆಡ್ ಕಾರ್ಡ್ ಆಗಿ ಬದಲಾಯಿಸಲಾಯಿತು.
ಕೊನೆ ಅವರ ಬದಲಿಗೆ ಕಣಕ್ಕಿಳಿದ ನಾಥನ್ ಸಲಿಬಾ ಫ್ರೀ-ಕಿಕ್ ಮೂಲಕ ಅದ್ಭುತ ಗೋಲು ಗಳಿಸಿ ತಂಡದ ಮುನ್ನಡೆಯನ್ನು 4-0ಕ್ಕೆ ಹೆಚ್ಚಿಸಿದರು. ಗೋಲು ಬಾರಿಸಿದ ನಂತರ ಅವರು ತಮ್ಮ ಗಾಯಾಳು ಸಹ ಆಟಗಾರನ ಜರ್ಸಿಯನ್ನು ಎತ್ತಿ ತೋರಿಸಿ ಅವರಿಗೆ ಗೌರವ ಸಲ್ಲಿಸಿದರು.
ಖತರ್ ತಂಡದ ಮೊಹಮ್ಮದ್ ಮಾನ್ನೈ ಗಳಿಸಿದ ಓಜಿ ಗೋಲು ಅಂತರವನ್ನು 5-0 ಕ್ಕೆ ಹೆಚ್ಚಿಸಿತು . ಅಂತಿಮವಾಗಿ ಜೊನಾಥನ್ ಡೇವಿಡ್ ತಂಡದ 6ನೇ ಗೋಲು ಗಳಿಸಿ ತಮ್ಮ ಹ್ಯಾಟ್ರಿಕ್ ಪೂರೈಸಿದರು.
ಈ ಫಲಿತಾಂಶದ ಬಳಿಕ ಕೆನಡಾ ಬಿ ಗುಂಪಿನಲ್ಲಿ ಅಗ್ರಸ್ಥಾನವನ್ನು ಪಡೆದಿದೆ. ಈ ಪಂದ್ಯದಲ್ಲಿ ಖತರ್ ತಂಡವು ಯಾವುದೇ ನೇರ ಗುರಿಯಿಲ್ಲದೇ ಕೇವಲ 2 ಬಾರಿ ಗೋಲು ಪ್ರಯತ್ನ ನಡೆಸಿದರೆ , ಕೆನಡಾ ತಂಡವು 11 ನೇರ ಗುರಿಯೊಂದಿಗೆ 33 ಬಾರಿ ಗೋಲು ಪ್ರಯತ್ನ ನಡೆಸಿತು.






