ಇಂದಿನಿಂದ ಕೆನಡಾ ಓಪನ್: ಮೊದಲಿನ ಲಯ ಕಂಡುಕೊಳ್ಳುವತ್ತ ಸಿಂಧು, ಸೇನ್ ಚಿತ್ತ
ಟೊರಾಂಟೊ, ಜು.3: ಬಿಡಬ್ಲ್ಯುಎಫ್ ಸೂಪರ್ 500 ಸ್ಪರ್ಧೆ ಕೆನಡಾ ಓಪನ್ ಮಂಗಳವಾರದಿಂದ ಇಲ್ಲಿ ಆರಂಭವಾಗಲಿದ್ದು, ಭಾರತದ ಸ್ಟಾರ್ ಶಟ್ಲರ್ಗಳಾದ ಪಿ.ವಿ. ಸಿಂಧು ಹಾಗೂ ಲಕ್ಷ್ಯ ಸೇನ್ ಈಗ ನಡೆಯುತ್ತಿರುವ ಒಲಿಂಪಿಕ್ಸ್ ಅರ್ಹತಾ ಸರಣಿಯಲ್ಲಿ ಅಮೂಲ್ಯ ರ್ಯಾಂಕಿಂಗ್ ಪಾಯಿಂಟ್ಸ್ ಗಿಟ್ಟಿಸಿಕೊಳ್ಳಲು ತಮ್ಮ ಮೊದಲಿನ ಲಯಕ್ಕೆ ಮರಳುವತ್ತ ಗಮನ ಹರಿಸಿದ್ದಾರೆ. ಮಾಜಿ ವಿಶ್ವ ಚಾಂಪಿಯನ್ ಹಾಗೂ ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ. ಸಿಂಧು ಗಾಯದಿಂದ ಚೇತರಿಸಿಕೊಂಡು ವಾಪಸಾದ ನಂತರ ಕಳಪೆ ಫಾರ್ಮ್ನಲ್ಲಿದ್ದಾರೆ. ಮಾಜಿ ವಿಶ್ವದ ನಂ.2ನೇ ಆಟಗಾರ್ತಿ ಸಿಂಧು ಮಹಿಳೆಯರ ಸಿಂಗಲ್ಸ್ ರ್ಯಾಂಕಿಂಗ್ನಲ್ಲಿ 12ನೇ ಸ್ಥಾನಕ್ಕೆ ಕುಸಿದಿದ್ದಾರೆ.
27ರ ಹರೆಯದ ಸಿಂಧು ಕಳೆದ ವರ್ಷ ತನ್ನ ಚೊಚ್ಚಲ ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ಜಯಿಸಿದಾಗ ಗಾಯಗೊಂಡಿದ್ದರು. ಈಗಲೂ ಅವರು ಸಂಪೂರ್ಣ ದೈಹಿಕ ಕ್ಷಮತೆ ಪಡೆಯಲು ಪರದಾಡುತ್ತಿದ್ದಾರೆ.
ಫೆಬ್ರವರಿಯಲ್ಲಿ ದೋಹಾದಲ್ಲಿ ನಡೆದ ಏಶ್ಯ ಬ್ಯಾಡ್ಮಿಂಟನ್ ಮಿಕ್ಸೆಡ್ ಟೀಮ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ವಿಜೇತ ತಂಡದ ಭಾಗವಾಗಿದ್ದರು. ಆದರೆ, ಈ ವರ್ಷ ಕೆಲವು ವಿಶ್ವ ಟೂರ್ ಇವೆಂಟ್ಗಳಿಂದ ವಂಚಿತರಾಗಿದ್ದಾರೆ.
ಎಪ್ರಿಲ್ನಲ್ಲಿ ನಡೆದ ಮ್ಯಾಡ್ರಿಡ್ ಮಾಸ್ಟರ್ಸ್ ಸೂಪರ್ 300 ಸ್ಪರ್ಧೆಯಲ್ಲಿ ಬೆಳ್ಳಿ ಜಯಿಸಿದ್ದು ಈ ವರ್ಷ ಸಿಂಧು ಅವರ ಉತ್ತಮ ಸಾಧನೆ ಯಾಗಿದೆ. ಆ ನಂತರ ಅವರು ಎರಡು ಟೂರ್ನಮೆಂಟ್ಗಳಲ್ಲಿ ಮೊದಲ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದರು. ಮತ್ತೊಂದು ಟೂರ್ನಿಯಲ್ಲಿ 2ನೇ ಸುತ್ತಿನಲ್ಲಿ ಸೋಲುಂಡಿದ್ದರು.









