ಕೆನಡಿಯನ್ ಓಪನ್ | ಶೆಲ್ಟನ್, ವಿಕ್ಟೋರಿಯಾ ಎಂಬೋಕೊಗೆ ಪ್ರಶಸ್ತಿ

ವಿಕ್ಟೋರಿಯಾ ಎಂಬೋಕೊ | PC : X \ @tntsports
ಟೊರೊಂಟೊ, ಆ.8: ರಶ್ಯದ ಕರೆನ್ ಖಚನೋವ್ ಅವರನ್ನು ಮಣಿಸಿರುವ ಬೆನ್ ಶೆಲ್ಟನ್ ಅವರು 2003ರ ನಂತರ ಎಟಿಪಿ ಮಾಸ್ಟರ್ಸ್ -1000 ಪ್ರಶಸ್ತಿಯನ್ನು ಜಯಿಸಿದ ಅಮೆರಿಕದ ಮೊದಲ ಆಟಗಾರನಾಗಿ ಇತಿಹಾಸ ನಿರ್ಮಿಸಿದರು.
ಗುರುವಾರ ನಡೆದ ಕೆನಡಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಶೆಲ್ಟನ್ ಅವರು ಖಚನೋವ್ ರನ್ನು 6-7(5/7), 6-4, 7-6(7/3)ಸೆಟ್ ಗಳ ಅಂತರದಿಂದ ಮಣಿಸಿದರು. ಇದರೊಂದಿಗೆ ತನ್ನ ಮೊದಲ ಎಟಿಪಿ ಮಾಸ್ಟರ್ಸ್-1000 ಪ್ರಶಸ್ತಿಯನ್ನು ಎತ್ತಿ ಹಿಡಿದರು.
ಈ ಗೆಲುವಿನ ಮೂಲಕ ಎಟಿಪಿ ರ್ಯಾಂಕಿಂಗ್ ನಲ್ಲಿ ನೊವಾಕ್ ಜೊಕೊವಿಕ್ ರನ್ನು ಹಿಂದಿಕ್ಕಿರುವ ಶೆಲ್ಟನ್ ಅವರು ಆರನೇ ಸ್ಥಾನಕ್ಕೇರಿದ್ದಾರೆ.
ಪಂದ್ಯವು ಎರಡು ಗಂಟೆ ಹಾಗೂ 45 ನಿಮಿಷಗಳ ಕಾಲ ನಡೆದಿದ್ದು, ಶೆಲ್ಟನ್ ಅವರು 11ನೇ ಶ್ರೇಯಾಂಕದ ಖಚನೋವ್ ಗೆ 2ನೇ ಮಾಸ್ಟರ್ಸ್ ಪ್ರಶಸ್ತಿಯನ್ನು ನಿರಾಕರಿಸಿದರು. ಖಚನೋವ್ 2018ರಲ್ಲಿ ಪ್ಯಾರಿಸ್ ನಲ್ಲಿ ತನ್ನ ಚೊಚ್ಚಲ ಮಾಸ್ಟರ್ಸ್ ಪ್ರಶಸ್ತಿ ಗೆದ್ದಿದ್ದರು.
ಮಾಂಸಖಂಡದ ನೋವಿನೊಂದಿಗೆ ಆಡಿದ ಶೆಲ್ಟನ್ ಗೆ ಅವರ ತಂದೆ ಹಾಗೂ ಕೋಚ್ ಬ್ರಿಯಾನ್ ಶೆಲ್ಟನ್ ಅವರು ಪಂದ್ಯದುದ್ದಕ್ಕೂ ಪ್ರೋತ್ಸಾಹ ನೀಡಿದರು. ಗೆಲುವಿನ ನಂತರ ಶೆಲ್ಟನ್ ಅವರು ತಂದೆಯೊಂದಿಗೆ ಸಂಭ್ರಮಾಚರಿಸಿದರು. ಬ್ರಿಯಾನ್ ಅವರು ಮಾಜಿ ಎಟಿಪಿ ಆಟಗಾರನಾಗಿದ್ದಾರೆ.
ಟೊರೊಂಟೊದಲ್ಲಿ ಶೆಲ್ಟನ್ ವೃತ್ತಿಬದುಕಿನ ಮೂರನೇ ಪ್ರಶಸ್ತಿಯನ್ನು ಜಯಿಸಿದರು. 2023ರಲ್ಲಿ ಟೋಕಿಯೊ ಹಾಗೂ 2024ರಲ್ಲಿ ಹೌಸ್ಟನ್ ನಲ್ಲಿ ಪ್ರಶಸ್ತಿ ಜಯಿಸಿದ್ದರು.
ಶೆಲ್ಟನ್ ಫೈನಲ್ ಹಾದಿಯಲ್ಲಿ ಇಟಲಿಯ 13ನೇ ಶ್ರೇಯಾಂಕದ ಫ್ಲಾವಿಯೊ ಕೊಬೊಲ್ಲಿ, ಆಸ್ಟ್ರೇಲಿಯದ 9ನೇ ಶ್ರೇಯಾಂಕದ ಅಲೆಕ್ಸ್ ಡಿ ಮಿನೌರ್ ಹಾಗೂ ಅಮೆರಿಕದ 2ನೇ ಶ್ರೇಯಾಂಕದ ಟೇಲರ್ ಫ್ರಿಟ್ಜ್ ರನ್ನು ಮಣಿಸಿದ್ದರು.
ತನ್ನ ವೃತ್ತಿಜೀವನದ ಅತಿ ದೊಡ್ಡ ಪ್ರಶಸ್ತಿಯನ್ನು ಗೆದ್ದಿರುವ ಶೆಲ್ಟನ್ ಅವರು 2004ರಲ್ಲಿ ಆ್ಯಂಡಿ ರಾಡಿಕ್ ನಂತರ ಮಾಸ್ಟರ್ಸ್-1000 ಪ್ರಶಸ್ತಿ ಜಯಿಸಿದ ಅಮೆರಿಕದ ಕಿರಿಯ ಆಟಗಾರನಾಗಿದ್ದಾರೆ.
►ನವೋಮಿ ಒಸಾಕಗೆ ಸೋಲು, ವಿಕ್ಟೋರಿಯಾ ಎಂಬೋಕೊಗೆ ‘ವಿಕ್ಟರಿ’
ಇದೇ ವೇಳೆ ಕೆನಡಿಯನ್ ಓಪನ್ ಟೆನಿಸ್ ಟೂರ್ನಮೆಂಟ್ನಲ್ಲಿ ಕೆನಡಾದ ಕಿರಿಯ ಆಟಗಾರ್ತಿ ವಿಕ್ಟೋರಿಯಾ ಎಂಬೋಕೊ ಅವರು ನಾಲ್ಕು ಬಾರಿಯ ಗ್ರ್ಯಾನ್ಸ್ಲಾಮ್ ಚಾಂಪಿಯನ್ ನವೋಮಿ ಒಸಾಕಾರನ್ನು ಮಣಿಸುವ ಮೂಲಕ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ವಿಶ್ವದ 85ನೇ ರ್ಯಾಂಕಿನ ಆಟಗಾರ್ತಿ ಎಂಬೋಕೊ ಅವರು ಜಪಾನಿನ ಆಟಗಾರ್ತಿ ಒಸಾಕಾರನ್ನು 2-6, 6-4, 6-1 ಸೆಟ್ ಗಳ ಅಂತರದಿಂದ ಮಣಿಸಿದರು.
ಈ ವರ್ಷದ ಆರಂಭದಲ್ಲಿ ಟಾಪ್-300ಕ್ಕಿಂತ ಹೊರಗಿದ್ದ 18ರ ವಯಸ್ಸಿನ ಎಂಬೋಕೊ 27ರ ಹರೆಯದ ಜಪಾನಿನ ಸ್ಟಾರ್ ಆಟಗಾರ್ತಿಯ ಎದುರು ಗೆಲುವು ದಾಖಲಿಸಿದ ಹಿನ್ನೆಲೆಯಲ್ಲಿ ವಿಶ್ವ ರ್ಯಾಂಕಿಂಗ್ ನಲ್ಲಿ 34ನೇ ರ್ಯಾಂಕಿಗೆ ತಲುಪಲು ಸಜ್ಜಾಗಿದ್ದಾರೆ.
ಎಂಬೋಕೊ ಟೂರ್ನಮೆಂಟ್ನುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಹಲವು ಗ್ರ್ಯಾನ್ಸ್ಲಾಮ್ ಪ್ರಶಸ್ತಿ ವಿಜೇತ ಆಟಗಾರ್ತಿಯರನ್ನು ಮಣಿಸಿದ್ದಾರೆ.
2ನೇ ಸುತ್ತಿನಲ್ಲಿ ಮಾಜಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಸೋಫಿಯಾ ಕೆನಿನ್ ರನ್ನು, 4ನೇ ಸುತ್ತಿನಲ್ಲಿ ಹಾಲಿ ಫ್ರೆಂಚ್ ಓಪನ್ ಚಾಂಪಿಯನ್ ಕೊಕೊ ಗೌಫ್ ಹಾಗೂ ಸೆಮಿ ಫೈನಲ್ ನಲ್ಲಿ ವಿಂಬಲ್ಡನ್ ವಿನ್ನರ್ ಎಲೆನಾ ರೈಬಾಕಿನಾರನ್ನು ಮಣಿಸಿದ್ದಾರೆ.
‘‘ಮಾಂಟ್ರಿಯಲ್ ನಲ್ಲಿ ಇದು ಅದ್ಭುತ ವಾರವಾಗಿತ್ತು. ಅದ್ಭುತ ಪಂದ್ಯಕ್ಕಾಗಿ ನಾನು ನವೋಮಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಾನು ಚಿಕ್ಕವನಿದ್ದಾಗ ಅವರನ್ನು ಗೌರವದಿಂದ ನೋಡುತ್ತಿದ್ದೆ. ಹೀಗಾಗಿ ನವೋಮಿ ಅವರಂತಹ ದಿಗ್ಗಜ ಆಟಗಾರ್ತಿಯೊಂದಿಗೆ ಆಡುವುದು ಯಾವಾಗಲೂ ಅಮೋಘವಾಗಿದೆ’’ ಎಂದು ಎಂಬೋಕೊ ಹೇಳಿದ್ದಾರೆ.
ಮೊದಲ ಸೆಟ್ನಲ್ಲಿ 3-0 ಮುನ್ನಡೆ ಸಾಧಿಸುವ ಮೂಲಕ ಒಸಾಕಾ ಕ್ಷಿಪ್ರವಾಗಿ ಪ್ರಾಬಲ್ಯ ಮೆರೆದರು. ಎಂಬೋಕೊ 22 ಅನಗತ್ಯ ತಪ್ಪೆಸಗಿದ ಪರಿಣಾಮ ಮೊದಲ ಸೆಟ್ಟನ್ನು 2-6 ಅಂತರದಿಂದ ಸೋತಿದ್ದಾರೆ.
ಏಳು ಸರ್ವಿಸ್ ಬ್ರೇಕ್ ಮೂಲಕ ಎರಡನೇ ಸೆಟ್ನಲ್ಲಿ ನಾಟಕೀಯ ತಿರುವು ಲಭಿಸಿದ್ದು, 5-2 ಮುನ್ನಡೆ ಪಡೆದ ಎಂಬೋಕೊ ಮೇಲುಗೈ ಪಡೆದರು. ಮೂರು ಡಬಲ್ ಫಾಲ್ಟ್ನಿಂದಾಗಿ ಕಠಿಣ ಪರಿಸ್ಥಿತಿ ಎದುರಾದ ಹೊರತಾಗಿಯೂ ಎಂಬೋಕೊ ಅವರು 2ನೇ ಸೆಟ್ಟನ್ನು 6-4 ಅಂತರದಿಂದ ಗೆದ್ದುಕೊಂಡರು.
ಕೆನಡಾದ ಆಟಗಾರ್ತಿ 3ನೇ ಗೇಮ್ನಲ್ಲಿ ಒತ್ತಡ ಎದುರಿಸಿದ್ದರೂ 4 ಬ್ರೇಕ್ ಪಾಯಿಂಟ್ಸ್ ಉಳಿಸಿ 3-1 ಮುನ್ನಡೆ ಸಾಧಿಸಿದರು. 3ನೇ ಸೆಟ್ ವೇಳೆ ಆಕಾಶದತ್ತ ಚೆಂಡನ್ನು ಬಡಿದ ಒಸಾಕಾ ಅಂಪೈರ್ರಿಂದ ಎಚ್ಚರಿಕೆ ಪಡೆದರು. ಜಪಾನ್ ಆಟಗಾರ್ತಿ ತನ್ನ ಪರದಾಟವನ್ನು ಮುಂದುವರಿಸಿದ್ದು, ಎಂಬೋಕೊ ಸತತ 5 ಗೇಮ್ಗಳನ್ನು ಗೆದ್ದುಕೊಂಡು 3ನೇ ಸೆಟ್ಟನ್ನು 6-1 ಅಂತರದಿಂದ ಗೆದ್ದುಕೊಂಡರು.
ಸದ್ಯ ವಿಶ್ವ ರ್ಯಾಂಕಿಂಗ್ ನಲ್ಲಿ 49ನೇ ಸ್ಥಾನದಲ್ಲಿರುವ ಒಸಾಕಾ, ಇತ್ತೀಚೆಗೆ ತನ್ನ ತರಬೇತುದಾರರನ್ನು ಬದಲಾಯಿಸಿದ ನಂತರ ಪ್ರಸಕ್ತ ಪಂದ್ಯಾವಳಿಯುದ್ದಕ್ಕೂ ಭರವಸೆಯ ಪ್ರದರ್ಶನ ನೀಡಿದ್ದಾರೆ.
2022ರಲ್ಲಿ ಮಯಾಮಿ ಮಾಸ್ಟರ್ಸ್ ಟೂರ್ನಿಯಲ್ಲಿ ಫೈನಲ್ ಗೆ ತಲುಪಿದ ನಂತರ ಡಬ್ಲ್ಯುಟಿಎ-1000 ಟೂರ್ನಮೆಂಟ್ನಲ್ಲಿ ಒಸಾಕಾ ಅವರ ಶ್ರೇಷ್ಠ ಪ್ರದರ್ಶನ ಇದಾಗಿದೆ.
ಟ್ರೋಫಿ ಪ್ರದಾನ ಸಮಾರಂಭದಲ್ಲಿ ಚುಟುಕಾಗಿ ಮಾತನಾಡಿದ ಒಸಾಕಾ, ‘‘ನಾನು ಮಾತನಾಡಲು ಹೆಚ್ಚು ಸಮಯ ತೆಗೆದುಕೊಳ್ಳಲು ಬಯಸುವುದಿಲ್ಲ. ನಾನು ಎಲ್ಲರಿಗೂ ಧನ್ಯವಾದ ಹೇಳುತ್ತೇನೆ’’ ಎಂದರು.







