ಕೇಪ್ ವರ್ಡ್ ವಿಶ್ವಕಪ್ ಹೀರೋ ವೊಝಿನ್ಹಾ ಚಿಲಿಯನ್ ಕ್ಲಬ್ಗೆ ಸೇರ್ಪಡೆ

ಗೋಲ್ಕೀಪರ್ ವೊಝಿನ್ಹಾ | Photo Credit : Esteban Felix/X
ಕೇಪ್ಟೌನ್, ಆ.4: ಇತ್ತೀಚೆಗೆ ಫಿಫಾ ವಿಶ್ವಕಪ್ ಟೂರ್ನಿಯ ವೇಳೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಕೇಪ್ವರ್ಡ್ ತಂಡದ ಹಿರಿಯ ಗೋಲ್ಕೀಪರ್ ವೊಝಿನ್ಹಾ ಕೊಲೊ-ಕೊಲೊದೊಂದಿಗೆ ಸಹಿ ಹಾಕಿದ್ದಾರೆ ಎಂದು ಚಿಲಿಯನ್ ಕ್ಲಬ್ ಸೋಮವಾರ ಪ್ರಕಟಿಸಿದೆ.
‘ವೊಝಿನ್ಹಾ ತನ್ನ ಗುತ್ತಿಗೆಗೆ ಸಹಿ ಹಾಕಿದ್ದಾರೆ ಹಾಗೂ ಅಧಿಕೃತವಾಗಿ ಕೊಲೊ-ಕೊಲೊದ ನೂತನ ಆಟಗಾರನಾಗಿದ್ದಾರೆ’ ಎಂದು ಕ್ಲಬ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.
40ರ ವಯಸ್ಸಿನ ವೊಝಿನ್ಹಾ ಆರು ತಿಂಗಳ ಅವಧಿಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದನ್ನು ಒಂದು ವರ್ಷಕ್ಕೆ ವಿಸ್ತರಿಸುವ ಸಾಧ್ಯತೆಯಿದೆ’’ ಎಂದು ವರದಿ ತಿಳಿಸಿದೆ.
ವೊಝಿನ್ಹಾ ಆಗಸ್ಟ್ 16ರಂದು ಕೊಲೊ-ಕೊಲೊ ಪರ ತನ್ನ ಚೊಚ್ಚಲ ಪಂದ್ಯವನ್ನಾಡಲಿದ್ದಾರೆ. ಕೊಲೊ-ಕೊಲೊ ಕ್ಲಬ್ ಚಿಲಿಯನ್ ಪ್ರೀಮಿಯರ್ ಡಿವಿಜನ್ನಲ್ಲಿ ಮುನ್ನಡೆ ಕಾಯ್ದುಕೊಳ್ಳುವ ವಿಶ್ವಾಸದಲ್ಲಿದೆ.
ಉತ್ತರ ಅಮೆರಿಕದಲ್ಲಿ ನಡೆದಿದ್ದ ವಿಶ್ವಕಪ್ನಲ್ಲಿ ಆಫ್ರಿಕಾದ ಪುಟ್ಟ ರಾಷ್ಟ್ರ ಕೇಪ್ವರ್ಡ್ ಪರ ವೊಝಿನ್ಹಾ ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಅಂತಿಮ-32ರ ಸುತ್ತಿನಲ್ಲಿ ಅರ್ಜೆಂಟೀನ ತಂಡದ ವಿರುದ್ಧ ಅಲ್ಪ ಅಂತರದಿಂದ ಸೋಲುವ ಮೊದಲು ಕೇಪ್ವರ್ಡ್ ತಂಡವು ಗ್ರೂಪ್ ಹಂತವನ್ನು ದಾಟುವಲ್ಲಿ ನೆರವಾಗಿದ್ದರು.
ಕೇಪ್ ವರ್ಡ್ ತಂಡವು ಗ್ರೂಪ್ ಹಂತದಲ್ಲಿ ಸ್ಪೇನ್ ವಿರುದ್ಧ ಗೋಲುರಹಿತ ಡ್ರಾ ಹಾಗೂ ಎರಡು ಬಾರಿಯ ಚಾಂಪಿಯನ್ ಉರುಗ್ವೆ ವಿರುದ್ಧ ಜಯ ಸಾಧಿಸಿತ್ತು. ಜಾಗತಿಕ ಟೂರ್ನಮೆಂಟ್ನಲ್ಲಿ ಕಾಲಿಟ್ಟಿರುವ ಕೇಪ್ವರ್ಡ್ ತಂಡವು ಗಮನಾರ್ಹ ಪ್ರದರ್ಶನ ನೀಡುವಲ್ಲಿ ವೊಝಿನ್ಹಾ ಮಹತ್ವದ ಪಾತ್ರವಹಿಸಿದ್ದರು.
ಜೂನ್ನಲ್ಲಿ ನಡೆದ ಸ್ಪೇನ್ ವಿರುದ್ಧ ಗ್ರೂಪ್ ಪಂದ್ಯದಲ್ಲಿ ವೊಝಿನ್ಹಾ ವೀರೋಚಿತ ಪ್ರದರ್ಶನ ನೀಡಿದ ನಂತರ ತನ್ನ ಇನ್ಸ್ಟಾಗ್ರಾಮ್ನಲ್ಲಿ ಸುಮಾರು 50,000 ಫಾಲೋವರ್ಸ್ನಿಂದ ಸುಮಾರು 17.4 ಮಿಲಿಯನ್ ಫಾಲೋವರ್ಸ್ಗಳನ್ನು ಪಡೆದಿದ್ದರು.






