Wimbledon Championship ನಿಂದ ಹಿಂದೆ ಸರಿದ ಕಾರ್ಲೊಸ್ ಅಲ್ಕರಾಝ್

ಕಾರ್ಲೊಸ್ ಅಲ್ಕರಾಝ್ | Photo Credit : NDTV
ಲಂಡನ್, ಮೇ 20: ‘‘ಜೂನ್ನಲ್ಲಿ ಆರಂಭವಾಗಲಿರುವ ವಿಂಬಲ್ಡನ್ ಟೆನಿಸ್ ಚಾಂಪಿಯನ್ಶಿಪ್ನಿಂದ ಹಿಂದೆ ಸರಿಯುತ್ತಿದ್ದೇನೆ’’ ಎಂದು ವಿಶ್ವದ ನಂ.2ನೇ ಆಟಗಾರ ಕಾರ್ಲೊಸ್ ಅಲ್ಕರಾಝ್ ಅವರು ಬಹಿರಂಗಪಡಿಸಿದ್ದಾರೆ. ಸ್ಪೇನ್ ನ ಸ್ಟಾರ್ ಆಟಗಾರ ಸದ್ಯ ಮಣಿಕಟ್ಟಿನ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ.
‘‘ನಾನು ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದೇನೆ. ಆದರೆ ದುರದೃಷ್ಟವಶಾತ್ ನಾನು ಆಡಲು ಇನ್ನೂ ಸಂಪೂರ್ಣ ಸಿದ್ಧವಾಗಿಲ್ಲ. ಹೀಗಾಗಿ ನಾನು ಕ್ವೀನ್ಸ್ ಹಾಗೂ ವಿಂಬಲ್ಡನ್ ಟೂರ್ನಿಗಳಿಂದ ಹಿಂದೆ ಸರಿಯುತ್ತಿರುವೆ. ಈ ಎರಡು ನನಗೆ ನಿಜವಾಗಿಯೂ ವಿಶೇಷ ಟೂರ್ನಮೆಂಟ್ ಗಳಾಗಿವೆ. ಅದರಿಂದ ನಾನು ತುಂಬಾ ವಂಚಿತನಾಗುತ್ತಿರುವೆ. ಸಾಧ್ಯವಾದಷ್ಟು ಬೇಗನೆ ವಾಪಸಾಗಲು ನಾವು ಕಾರ್ಯೋನ್ಮುಖವಾಗುವೆವು’’ ಎಂದು ಎಕ್ಸ್ನಲ್ಲಿ ಅಲ್ಕರಾಝ್ ಪೋಸ್ಟ್ ಮಾಡಿದ್ದಾರೆ.
23 ವರ್ಷದ ಅಲ್ಕರಾಝ್ ಅವರು ರವಿವಾರದಿಂದ ಆರಂಭವಾಗಲಿರುವ ಫ್ರೆಂಚ್ ಓಪನ್ ಟೂರ್ನಿಯಿಂದ ಈಗಾಗಲೇ ಹಿಂದೆ ಸರಿದಿದ್ದಾರೆ. ಅಲ್ಕರಾಝ್ ಅವರು ಫ್ರೆಂಚ್ ಓಪನ್ ಟೂರ್ನಿಯ ಹಾಲಿ ಚಾಂಪಿಯನ್ ಆಗಿದ್ದಾರೆ.
ಕಳೆದ ತಿಂಗಳು ಬಾರ್ಸಿಲೋನಾ ಓಪನ್ ಟೂರ್ನಿಯ ಮೊದಲ ಸುತ್ತಿನ ಪಂದ್ಯದ ವೇಳೆ ಅಲ್ಕರಾಝ್ ಗಾಯಗೊಂಡಿದ್ದರು. ಆ ಟೂರ್ನಿಯಲ್ಲಿ ಒಟ್ಟೊ ವಿರ್ಟನನ್ ರನ್ನು ಮಣಿಸಿದ್ದ ಅಲ್ಕರಾಝ್ ಪಂದ್ಯಾವಳಿಯಿಂದ ಹೊರಗುಳಿದಿದ್ದರು.
ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಗೆದ್ದಿದ್ದ ಅಲ್ಕರಾಝ್, ಎಲ್ಲ ನಾಲ್ಕು ಗ್ರ್ಯಾನ್ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಕಿರಿಯ ಆಟಗಾರ ಎನಿಸಿಕೊಂಡಿದ್ದರು. ಈ ಋತುವಿನಲ್ಲಿ 22-3 ಗೆಲುವು-ಸೋಲಿನ ದಾಖಲೆ ಹೊಂದಿರುವ ಅಲ್ಕರಾಝ್ ಅವರು ದೋಹಾದಲ್ಲಿ ಪ್ರಶಸ್ತಿ ಗೆದ್ದಿದ್ದರು.
ವಿಶ್ವದ ಎರಡನೇ ರ್ಯಾಂಕಿನ ಆಟಗಾರನಾಗಿರುವ ಅಲ್ಕರಾಝ್, ಎಪ್ರಿಲ್ 12ರಂದು ಮಾಂಟೆ ಕಾರ್ಲೊ ಮಾಸ್ಟರ್ಸ್ ಟೂರ್ನಿಯ ಫೈನಲ್ನಲ್ಲಿ ಜನ್ನಿಕ್ ಸಿನ್ನರ್ ವಿರುದ್ಧ ಸೋತ ಹಿನ್ನೆಲೆಯಲ್ಲಿ ಅಗ್ರ ಸ್ಥಾನ ಕಳೆದುಕೊಂಡಿದ್ದರು.






