ಚಾಂಪಿಯನ್ಸ್ ಟ್ರೋಫಿ | ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಿಸಿಬಿ ಪ್ರತಿನಿಧಿಗಳ ಗೈರು

PC : PTI
ದುಬೈ: ಭಾರತ ಹಾಗೂ ನ್ಯೂಝಿಲ್ಯಾಂಡ್ ನಡುವೆ ರವಿವಾರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯ ಮುಗಿದ ನಂತರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ(ಪಿಸಿಬಿ)ಅಧಿಕಾರಿಗಳು ಗೈರಾಗಿದ್ದು, ಇದು ಎಲ್ಲರ ಹುಬ್ಬೇರುವಂತೆ ಮಾಡಿದೆ.
ಪಾಕಿಸ್ತಾನವು ಪಂದ್ಯಾವಳಿಯ ಆತಿಥ್ಯವನ್ನು ವಹಿಸಿದ ಹೊರತಾಗಿಯೂ ಪಿಸಿಬಿಯ ಯಾವೊಬ್ಬ ಪದಾಧಿಕಾರಿಯು ಸಮಾರಂಭದ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರು ಪ್ರಶಸ್ತಿವಿಜೇತ ಭಾರತ ಕ್ರಿಕೆಟ್ ತಂಡದ ಆಟಗಾರರಿಗೆ ವೈಟ್ ಜಾಕೆಟ್ಗಳನ್ನು ಹಾಗೂ ಪಂದ್ಯದ ಅಧಿಕಾರಿಗಳಿಗೆ ಪದಕಗಳನ್ನು ಪ್ರದಾನಿಸಿದರು.
ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿಯ(ಐಸಿಸಿ)ಅಧ್ಯಕ್ಷ ಜಯ್ ಶಾ ಅವರು ರೋಹಿತ್ ಶರ್ಮಾಗೆ ಟ್ರೋಫಿಯನ್ನು ಹಸ್ತಾಂತರಿಸಿದರು. ಭಾರತೀಯ ಆಟಗಾರರಿಗೆ ಪದಕಗಳನ್ನು ಪ್ರದಾನಿಸಿದರು.
ಶುಐಬ್ ಅಖ್ತರ್ ಸಹಿತ ಪಾಕಿಸ್ತಾನದ ಹಲವು ಕ್ರಿಕೆಟಿಗರು ಪಿಸಿಬಿ ಅಧಿಕಾರಿಗಳು ಗೈರು ಹಾಜರಿಯಾಗಿದ್ದನ್ನು ಪ್ರಶ್ನಿಸಿದರು.
ಜಯ್ ಶಾ ಹಾಗೂ ಐಸಿಸಿ ಮಂಡಳಿ ನಿರ್ದೇಶಕರಾದ-ದೇವಜಿತ್ ಸೈಕಿಯಾ, ರೋಜರ್ ಟ್ವೋಸ್ ಹಾಗೂ ಬಿನ್ನಿ ಉಪಸ್ಥಿತಿಯಲ್ಲಿ ಸಮಾರಂಭ ನೆರವೇರಿತು.
ಐಸಿಸಿ ಸ್ಪರ್ಧಾವಳಿಯ ಸಂಪ್ರದಾಯದ ಪ್ರಕಾರ ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆಯಲ್ಲಿ ಸಾಮಾನ್ಯವಾಗಿ ನಿರ್ದೇಶಕರು ಹಾಗೂ ಪದಾಧಿಕಾರಿಗಳು ಇರುತ್ತಾರೆ. ಇದೊಂದು ಜಾಗತಿಕ ಪಂದ್ಯಾವಳಿ, ವೇದಿಕೆ ಮೇಲೆ ಯಾರಿರಬೇಕೆಂದು ಐಸಿಸಿ ನಿರ್ಧರಿಸುತ್ತದೆ. ಪಿಸಿಬಿ ಅಧ್ಯಕ್ಷರು ಹಾಜರಿರುತ್ತಿದ್ದರೆ, ಆತಿಥೇಯ ದೇಶದ ಮುಖ್ಯಸ್ಥರಾಗಿ ವೇದಿಕೆ ಮೇಲೆ ಹಾಜರಿರುತ್ತಿದ್ದರು. ಪಿಸಿಬಿ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಇತರ ನಿರ್ದೇಶಕರು ವೇದಿಕೆ ಏರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನವು ಸುಮಾರು 3 ದಶಕಗಳ ನಂತರ ಜಾಗತಿಕ ಕ್ರೀಡಾಕೂಟದ ಆತಿಥ್ಯವನ್ನು ವಹಿಸಿದ್ದರೂ, ಭದ್ರತೆಯ ಭೀತಿಯನ್ನು ಉಲ್ಲೇಖಿಸಿ ಪಾಕಿಸ್ತಾನದಲ್ಲಿ ತನ್ನ ಪಂದ್ಯಗಳನ್ನು ಆಡಲು ಭಾರತ ತಂಡವು ನಿರಾಕರಿಸಿದ್ದು, ತಟಸ್ಥ ತಾಣ ದುಬೈನಲ್ಲಿ ತನ್ನ ಎಲ್ಲಾ ಪಂದ್ಯಗಳನ್ನು ಆಡಿತ್ತು.







