ಚಾಂಪಿಯನ್ಸ್ ಟ್ರೋಫಿ | ಪಾಕ್ ಗೆ ವೇದಿಕೆಯಲ್ಲಿರುವ ಅರ್ಹತೆಯಿಲ್ಲ: ಕಾಮ್ರಾನ್ ಅಕ್ಮಲ್

ಕಾಮ್ರಾನ್ ಅಕ್ಮಲ್ | PTI
ಲಾಹೋರ್ : ಇತ್ತೀಚೆಗೆ ಮುಕ್ತಾಯಗೊಂಡಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆತಿಥೇಯ ಪಾಕಿಸ್ತಾನದ ಪ್ರತಿನಿಧಿಯ ಅನುಪಸ್ಥಿತಿ ಬಗ್ಗೆ ಆ ದೇಶದ ಮಾಜಿ ವಿಕೆಟ್ಕೀಪರ್ ಕಾಮ್ರಾನ್ ಅಕ್ಮಲ್ ನೀಡಿರುವ ಹೇಳಿಕೆಯು ಇನ್ನೊಂದು ವಿವಾದಕ್ಕೆ ಕಾರಣವಾಗಿದೆ.
ತಂಡದ ಕಳಪೆ ನಿರ್ವಹಣೆ ಮತ್ತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಗೌರವದ ಕೊರತೆಯ ಹಿನ್ನೆಲೆಯಲ್ಲಿ, ವೇದಿಕೆಯಲ್ಲಿ ತನ್ನ ಪ್ರತಿನಿಧಿಯನ್ನು ಹೊಂದುವ ಅರ್ಹತೆಯನ್ನು ಪಾಕಿಸ್ತಾನ ಹೊಂದಿಲ್ಲ ಎಂದು ಅಕ್ಮಲ್ ಹೇಳಿದ್ದಾರೆ.
‘‘ಐಸಿಸಿ ನಮಗೆ ಕನ್ನಡಿಯನ್ನು ತೋರಿಸಿದೆ’’ ಎಂದು ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಅಕ್ಮಲ್ ಹೇಳಿದರು. ‘‘ಪಂದ್ಯಾವಳಿಯ ನಿರ್ದೇಶಕರು (ಸುಮೈರ್) ಅಲ್ಲಿದ್ದರು. ಅವರು ಲಭ್ಯರಿದ್ದರು. ಹಾಗಾದರೆ, ಸಮಾರಂಭದ ವೇದಿಕೆಯಲ್ಲಿ ಅವರು ಯಾಕೆ ಇರಲಿಲ್ಲ? ಯಾಕೆಂದರೆ, ನಮಗೆ ಅಲ್ಲಿರುವ ಅರ್ಹತೆಯಿಲ್ಲ. ನಾವು ಉತ್ತಮ ಕ್ರಿಕೆಟ್ ಆಡುತ್ತಿಲ್ಲ. ಚಿಕ್ಕ ತಂಡಗಳು ನಮಗೆ ಕನ್ನಡಿಯನ್ನು ಹಿಡಿದಿವೆ’’ ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ನ ಪ್ರಸಕ್ತ ಸ್ಥಿತಿಗತಿಯ ಬಗ್ಗೆ ಅವರು ನಿರಾಶೆ ವ್ಯಕ್ತಪಡಿಸಿದರು. ‘‘ಪಾಕಿಸ್ತಾನವು ಪಂದ್ಯಾವಳಿಯನ್ನು ಹೇಗೆ ಆಯೋಜಿಸಿತು ಎಂಬ ಬಗ್ಗೆ ಯಾರೂ ಚರ್ಚಿಸಲಿಲ್ಲ. ನಾವು ಯಾವ ರೀತಿಯ ಕ್ರಿಕೆಟ್ ಆಡುತ್ತೇವೋ, ಹಾಗೆಯೇ ನಮ್ಮನ್ನು ಕಾಣಲಾಗುತ್ತದೆ. ನಾವು ನಮ್ಮಷ್ಟಕ್ಕೆ ಆಡಿದರೆ ನಮಗೆ ಯಾರೂ ಗೌರವ ಕೊಡುವುದಿಲ್ಲ’’ ಎಂದರು.
►ಐಸಿಸಿ ಸಮರ್ಥನೆ?
ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆತಿಥೇಯ ಪಾಕಿಸ್ತಾನದ ಪ್ರತಿನಿಧಿಯನ್ನು ಆಹ್ವಾನಿಸದಿರುವ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ಔಪಚಾರಿಕ ದೂರು ಸಲ್ಲಿಸಿದ್ದು, ಇದು ಅಸ್ವೀಕಾರಾರ್ಹ ಎಂದು ಬಣ್ಣಿಸಿದೆ.
ಆದರೆ, ಐಸಿಸಿ ಮೂಲಗಳು ಈ ದೂರನ್ನು ತಳ್ಳಿಹಾಕಿವೆ ಎನ್ನಲಾಗಿದೆ. ಅಂದರೆ, ಐಸಿಸಿ, ಪಿಸಿಬಿಗೆ ಔಪಚಾರಿಕ ವಿವರಣೆ ನೀಡುವ ಅಥವಾ ಕ್ಷಮಾಪಣೆ ಕೋರುವ ಸಾಧ್ಯತೆ ಇಲ್ಲ. ಪಂದ್ಯಾವಳಿಯ ಶಿಷ್ಟಾಚಾರದ ಪ್ರಕಾರ, ಪಂದ್ಯಾವಳಿಯ ನಿರ್ದೇಶಕರು ವೇದಿಕೆಯಲ್ಲಿ ಉಪಸ್ಥಿತರಿರುವುದು ಕಡ್ಡಾಯವಲ್ಲ ಎಂಬ ವಾದವನ್ನು ಐಸಿಸಿ ಮುಂದಿಟ್ಟಿದೆ ಎನ್ನಲಾಗಿದೆ.
‘‘ಪಿಸಿಬಿ ಅಧಿಕಾರಿಗಳು ಗಮನಿಸುವುದಾದರೆ, ಐಸಿಸಿ ಸಿಇಒ ಜೆಫ್ ಅಲಾರ್ಡಿಸ್ ಕೂಡ ವೇದಿಕೆಯಲ್ಲಿ ಉಪಸ್ಥಿತರಿರಲಿಲ್ಲ. ಅದಕ್ಕೆ ಕಾರಣ ಶಿಷ್ಟಾಚಾರ. ಸುಮೈರ್ ಅಹ್ಮದ್ ಪಿಸಿಬಿಯ ಓರ್ವ ಉದ್ಯೋಗಿ, ಪದಾಧಿಕಾರಿಯಲ್ಲ. ಅದೂ ಅಲ್ಲದೆ, ಯಾವತ್ತಾದರೂ ಪಂದ್ಯಾವಳಿಯೊಂದರ ನಿರ್ದೇಶಕರು ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆಯಲ್ಲಿದ್ದರೆ ಎನ್ನುವುದನ್ನೂ ದಯವಿಟ್ಟು ಪರಿಶೀಲಿಸಿ’’ ಎಂಬುದಾಗಿ ಐಸಿಸಿ ಮೂಲವೊಂದು ಪಿಟಿಐಗೆ ಹೇಳಿದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಭಾರತೀಯ ಆಟಗಾರರಿಗೆ ಬಿಳಿ ಜಾಕೆಟ್ಗಳನ್ನು ವಿತರಿಸಿದರು ಮತ್ತು ಪಂದ್ಯದ ಅಧಿಕಾರಿಗಳಿಗೆ ಪದಕಗಳನ್ನು ನೀಡಿದರು. ಐಸಿಸಿ ಅಧ್ಯಕ್ಷ ಜಯ ಶಾ ಟ್ರೋಫಿಯನ್ನು ಭಾರತ ತಂಡದ ನಾಯಕ ರೋಹಿತ್ ಶರ್ಮಾಗೆ ಪ್ರದಾನ ಮಾಡಿದರು.
ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯ ಮತ್ತು ನ್ಯೂಝಿಲ್ಯಾಂಡ್ ಕ್ರಿಕೆಟ್ ಸಿಇಒ ರೋಜರ್ ಟ್ವೋಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.