ಚೆನ್ನೈ ಗ್ರ್ಯಾಂಡ್ ಮಾಸ್ಟರ್ಸ್ ಚೆಸ್ ಟೂರ್ನಿ : ನಿಹಾಲ್ಗೆ ಜಯ, ಕೀಮರ್ ಗೆಲುವಿನ ಓಟ ಮುಂದುವರಿಕೆ

Photo Credit: MGD1
ಚೆನ್ನೈ,ಆ.10: ರೋಚಕವಾಗಿ ಸಾಗಿದ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಭಾರತದ ನಿಹಾಲ್ ಸರಿನ್ ಅವರು ಅಗ್ರ ಶ್ರೇಯಾಂಕದ ಅರ್ಜುನ್ ಇರಿಗೈಸಿ ಅವರನ್ನು ಮಣಿಸಿ ಶಾಕ್ ನೀಡಿದರು. ಈ ಮೂಲಕ ಚೆನ್ನೈ ಗ್ರ್ಯಾಂಡ್ ಮಾಸ್ಟರ್ಸ್ ಚೆಸ್ ಟೂರ್ನಿಯಲ್ಲಿ ತನ್ನ ಮೊದಲ ಗೆಲುವು ಸಂಪಾದಿಸಿದರು.
ಪಂದ್ಯಾವಳಿಯಲ್ಲಿ ತನ್ನ ಮೊದಲ 3 ಪಂದ್ಯಗಳ ಪೈಕಿ ಎರಡರಲ್ಲಿ ಸೋತಿದ್ದ ಸರಿನ್ ಕೊನೆಗೂ ತನಗಿಂತ ಗರಿಷ್ಠ ರ್ಯಾಂಕಿನ ಸಹ ಆಟಗಾರ ಅರ್ಜುನ್ರನ್ನು 4 ಗಂಟೆಗಳ ಹೋರಾಟದಲ್ಲಿ ಸೋಲಿಸಿದರು. ಪಂದ್ಯದಲ್ಲಿ ಬಿಳಿ ಕಾಯಿಯೊಂದಿಗೆ ಆಡಿರುವ ಸರಿನ್ ಪೂರ್ಣಾಂಕವನ್ನು ಪಡೆದರು.
ಇದೇ ವೇಳೆ ಜರ್ಮನಿಯ ವಿನ್ಸೆಂಟ್ ಕೀಮರ್ ಅವರು ಡಚ್ನ ಗ್ರ್ಯಾಂಡ್ಮಾಸ್ಟರ್ ಅನಿಶ್ ಗಿರಿ ವಿರುದ್ಧ ರವಿವಾರ 1/2-1/2 ರಿಂದ ಡ್ರಾ ಸಾಧಿಸಿದರು. ಅಂಕಪಟ್ಟಿಯಲ್ಲಿ ತನ್ನ ಅಗ್ರ ಸ್ಥಾನವನ್ನು ಭದ್ರಪಡಿಸಿಕೊಂಡರು.
ಭಾರತದ ಗ್ರ್ಯಾಂಡ್ ಮಾಸ್ಟರ್ ಕಾರ್ತಿಕೇಯನ್ ಮುರಳಿ ಕೂಡ ಪಂದ್ಯಾವಳಿಯಲ್ಲಿ ತನ್ನ ಮೊದಲ ಗೆಲುವು ದಾಖಲಿಸಿದರು. ಬಿಳಿ ಕಾಯಿಯೊಂದಿಗೆ ಆಡಿದ ಮುರಳಿ ನೆದರ್ಲ್ಯಾಂಡ್ಸ್ನ ಜೋರ್ಡನ್ ಫೊರೀಸ್ಟ್ರನ್ನು 1-0 ಅಂತರದಿಂದ ಸುಲಭವಾಗಿ ಮಣಿಸಿದರು.
ಭಾರತದ ಗ್ರ್ಯಾಂಡ್ ಮಾಸ್ಟರ್ಗಳಾದ ವಿದಿತ್ ಗುಜರಾತಿ ಹಾಗೂ ವಿ.ಪ್ರಣವ್ 86 ನಡೆಗಳ ನಂತರ ಪಂದ್ಯ ಡ್ರಾಗೊಳಿಸಿ ಅಂಕಗಳನ್ನು ಹಂಚಿಕೊಂಡರು. ಅಮೆರಿಕದ ರಾಯ್ ರಾಬ್ಸನ್ ಹಾಗೂ ಅವಾಂಡರ್ ಲಿಯಾಂಗ್ ನಡುವಿನ ಪಂದ್ಯ ಕೂಡ 1/2-1/2 ರಿಂದ ಡ್ರಾನಲ್ಲಿ ಕೊನೆಗೊಂಡಿದೆ.
ಚಾಲೆಂಜರ್ಸ್ ವಿಭಾಗದಲ್ಲಿ ಭಾರತೀಯ ಜಿಎಂ ಅಭಿಮನ್ಯು ಪುರಾಣಿಕ್ ಅವರು ಆರ್.ವೈಶಾಲಿ ವಿರುದ್ಧ 4ನೇ ಸುತ್ತಿನಲ್ಲಿ ಜಯ ಸಾಧಿಸಿದ ನಂತರ ಮುನ್ನಡೆ ದಾಖಲಿಸಿದರು.







