ಚೆನ್ನೈ ಗ್ರ್ಯಾಂಡ್ ಮಾಸ್ಟರ್ಸ್ ಚೆಸ್ ಟೂರ್ನಿ ಅರ್ಜುನ್ ವಿರುದ್ಧ ಡ್ರಾ ಸಾಧಿಸಿದ ಪ್ರಣವ್

PC : X
ಚೆನ್ನೈ, ಆ.11: ಅಗ್ರ ಶ್ರೇಯಾಂಕದ ಅರ್ಜುನ್ ಇರಿಗೈಸಿ ವಿರುದ್ಧ ಚೆನ್ನೈ ಗ್ರ್ಯಾಂಡ್ ಮಾಸ್ಟರ್ಸ್ ಚೆಸ್ ಟೂರ್ನಿಯಲ್ಲಿ ಸೋಮವಾರ ನಡೆದ ಐದನೇ ಸುತ್ತಿನ ಪಂದ್ಯದಲ್ಲಿ ಪ್ರಣವ್ ವಿ. ಡ್ರಾ ಸಾಧಿಸುವಲ್ಲಿ ಶಕ್ತರಾಗಿದ್ದಾರೆ.
ಮಾಸ್ಟರ್ಸ್ ಟೂರ್ನಿಯಲ್ಲಿ ಸ್ಪರ್ಧಿಸುತ್ತಿರುವ ಅತ್ಯಂತ ಕೆಳ ರ್ಯಾಂಕಿನ 18ರ ಹರೆಯದ ಚೆಸ್ ಆಟಗಾರ ಪ್ರಣವ್, ಭಾರತದ ನಂ.1 ಆಟಗಾರ ಅರ್ಜುನ್ ವಿರುದ್ದ ಮೇಲುಗೈ ಸಾಧಿಸಿದರು. ರವಿವಾರ 2ನೇ ಶ್ರೇಯಾಂಕದ ಅನಿಶ್ ಗಿರಿ ವಿರುದ್ಧ ಡ್ರಾ ಸಾಧಿಸಿದ ನಂತರ ಮತ್ತೊಂದು ಸಾಧನೆ ಮಾಡಿದರು.
ಅರ್ಜುನ್-ಪ್ರಣವ್ ನಡುವಿನ ಪಂದ್ಯವು 1/2-1/2 ಅಂತರದಿಂದ ಡ್ರಾನಲ್ಲಿ ಕೊನೆಗೊಂಡ ಕಾರಣ ಜರ್ಮನಿಯ ವಿನ್ಸೆಂಟ್ ಕೀಮರ್ ಅಂಕಪಟ್ಟಿಯಲ್ಲಿ ಒಂದು ಅಂಕದ ಮುನ್ನಡೆಯೊಂದಿಗೆ ತನ್ನ ಅಗ್ರ ಸ್ಥಾನವನ್ನು ಉಳಿಸಿಕೊಂಡರು.
ಗ್ರ್ಯಾಂಡ್ಮಾಸ್ಟರ್ ಕೀಮರ್ ಅವರು ವಿದಿತ್ ಗುಜರಾತಿ ವಿರುದ್ಧದ ಐದನೇ ಸುತ್ತಿನ ಪಂದ್ಯವನ್ನು ಕಪ್ಪುಕಾಯಿಯೊಂದಿಗೆ ಆಡಿದರು. ಸತತ 2ನೇ ಪಂದ್ಯದಲ್ಲಿ ಡ್ರಾ ಸಾಧಿಸಿದ ಕೀಮರ್ ಒಟ್ಟು 4 ಅಂಕ ಗಳಿಸಿದ್ದಾರೆ.
ಅರ್ಜುನ್ ಹಾಗೂ ಕೀಮರ್ ಮಂಗಳವಾರ ಮುಖಾಮುಖಿಯಾಗುವ ಸಾಧ್ಯತೆ ಇದ್ದು, 6ನೇ ಸುತ್ತಿನಲ್ಲಿ ಸಂಭಾವ್ಯ ಪ್ರಶಸ್ತಿ ವಿಜೇತರು ಹೊರಹೊಮ್ಮುವ ನಿರೀಕ್ಷೆ ಇದೆ.
ಇದೇ ವೇಳೆ ನೆದರ್ಲ್ಯಾಂಡ್ಸ್ನ ಅನಿಶ್ ಗಿರಿ ಪಂದ್ಯಾವಳಿಯಲ್ಲಿ ತನ್ನ 5ನೇ ಡ್ರಾ ಸಾಧಿಸಿ ನಿರಾಶಾದಾಯಕ ಪ್ರದರ್ಶನ ಮುಂದುವರಿಸಿದರು. ಸೋಮವಾರ ಭಾರತದ ಗ್ರ್ಯಾಂಡ್ಮಾಸ್ಟರ್ ಕಾರ್ತಿಕೇಯನ್ ಮುರಳಿ ವಿರುದ್ಧ ಗಿರಿ ಡ್ರಾ ಸಾಧಿಸಿದರು.
4ನೇ ಸುತ್ತಿನಲ್ಲಿ ಅರ್ಜುನ್ಗೆ ಸೋಲುಣಿಸಿದ್ದ ನಿಹಾಲ್ ಸರಿನ್ ಅವರು ಅಮೆರಿಕದ ಗ್ರ್ಯಾಂಡ್ ಮಾಸ್ಟರ್ ಅವಾಂಡರ್ ಲಿಯಾಂಗ್ ವಿರುದ್ಧ ಡ್ರಾ ಸಾಧಿಸಿದರು.
ಡಚ್ ಗ್ರ್ಯಾಂಡ್ಮಾಸ್ಟರ್ ಜೋರ್ಡನ್ ವಾನ್ ಫೊರೀಸ್ಟ್ ಹಾಗೂ ಅಮೆರಿಕದ ರೇ ರಾಬ್ಸನ್ ನಡುವಿನ ಪಂದ್ಯದಲ್ಲಿ ಸ್ಪಷ್ಟ ಫಲಿತಾಂಶ ಬಂದಿದೆ. ಸುಮಾರು ನಾಲ್ಕೂವರೆ ಗಂಟೆ ಕಾಲ ನಡೆದ ಪಂದ್ಯದಲ್ಲಿ ಜೋರ್ಡನ್ ಅವರು ರಾಬ್ಸನ್ ರನ್ನು 1-0 ಅಂತರದಿಂದ ಮಣಿಸಿದರು.
ಚಾಲೆಂಜರ್ಸ್ ವಿಭಾಗದಲ್ಲಿ ಆರ್.ವೈಶಾಲಿ ಸತತ 3ನೇ ಸೋಲು ಕಂಡಿದ್ದಾರೆ. ಸೋಮವಾರ 24ರ ಹರೆಯದ ವೈಶಾಲಿ ಅವರು ಹರ್ಷವರ್ಧನ ವಿರುದ್ದ ಸೋತಿದ್ದಾರೆ.







