ಚೆನ್ನೈ ಗ್ರ್ಯಾಂಡ್ಮಾಸ್ಟರ್ಸ್ ಚೆಸ್ ಟೂರ್ನಿ | ಹ್ಯಾಟ್ರಿಕ್ ಗೆಲುವು ದಾಖಲಿಸಿದ ಜರ್ಮನಿಯ ವಿನ್ಸೆಂಟ್ ಕೀಮರ್

ವಿನ್ಸೆಂಟ್ ಕೀಮರ್ | PC : X
ಚೆನ್ನೈ, ಆ.9: ಭಾರತದ ಕಾರ್ತಿಕೇಯನ್ ಮುರಳಿ ಅವರನ್ನು ಶನಿವಾರ ಮೂರು ಗಂಟೆಯೊಳಗೆ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ 1-0 ಅಂತರದಿಂದ ಮಣಿಸಿದ ಜರ್ಮನಿಯ ಚೆಸ್ ತಾರೆ ವಿನ್ಸೆಂಟ್ ಕೀಮರ್ ಅವರು 2025ರ ಆವೃತ್ತಿಯ ಚೆನ್ನೈ ಗ್ರ್ಯಾಂಡ್ ಮಾಸ್ಟರ್ ಚೆಸ್ ಪಂದ್ಯಾವಳಿಯಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದಾರೆ.
ಅತ್ಯುತ್ತಮ ಪ್ರದರ್ಶನ ನೀಡಿದ ಅಗ್ರ ಶ್ರೇಯಾಂಕದ ಅರ್ಜುನ್ ಇರಿಗೇಶಿ ಅವರು ಅಮೆರಿಕದ ರೇ ರಾಬ್ಸನ್ರನ್ನು 1-0 ಅಂತರದಿಂದ ಅಂತರದಿಂದ ಮಣಿಸುವ ಮೂಲಕ ಒಟ್ಟು 2.5 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಕೀಮರ್ ಗೆ ಪೈಪೋಟಿ ನೀಡುತ್ತಿದ್ದಾರೆ.
ಶನಿವಾರ ಭಾರತೀಯರ ನಡುವೆ ನಡೆದಿದ್ದ ಪ್ರಧಾನ ಸುತ್ತಿನ ಪಂದ್ಯದಲ್ಲಿ ವಿದಿತ್ ಗುಜರಾತಿ ಅವರು ನಿಹಾಲ್ ಸರಿನ್ರನ್ನು 1-0 ಅಂತರದಿಂದ ಸೋಲಿಸಿದರು.
ಅಮೆರಿಕದ ಗ್ರ್ಯಾಂಡ್ ಮಾಸ್ಟರ್ ಅವಾಂಡರ್ ಲಿಯಾಂಗ್ ನೆದರ್ಲ್ಯಾಂಡ್ಸ್ನ ಜೋರ್ಡನ್ ವಾನ್ ಫೋರಿಸ್ಟ್ ರನ್ನು 1-0 ಅಂತರದಿಂದ ಮಣಿಸಿ ಪಂದ್ಯಾವಳಿಯಲ್ಲಿ ತನ್ನ ಮೊದಲ ಗೆಲುವು ದಾಖಲಿಸಿದರು.
20ರ ಹರೆಯದ ಕೀಮರ್ ಶನಿವಾರದಂದು ಎಲ್ಲರ ಗಮನ ಸೆಳೆದಿದ್ದು, ಬಿಳಿ ಕಾಯಿಯೊಂದಿಗೆ ಆಡಿ ಆರಂಭದಲ್ಲೇ ಮೇಲುಗೈ ಸಾಧಿಸಿದರು.
ಇದೇ ವೇಳೆ ವಿ.ಪ್ರಣವ್ ಅವರು ಕಪ್ಪು ಕಾಯಿಯೊಂದಿಗೆ ಅಮೋಘ ಪ್ರದರ್ಶನ ನೀಡಿ ಗರಿಷ್ಠ ರ್ಯಾಂಕಿನ ಅನಿಶ್ ಗಿರಿ ವಿರುದ್ಧ ಡ್ರಾ ಸಾಧಿಸಿದರು.
ಚಾಲೆಂಜರ್ಸ್ ವಿಭಾಗದಲ್ಲಿ ಅಭಿಮನ್ಯು ಪುರಾಣಿಕ್ ಹಾಗೂ ಎಂ. ಪ್ರಾಣೇಶ್ ಜಂಟಿಯಾಗಿ ಮುನ್ನಡೆ ಸಾಧಿಸಿದರು. ಈ ಇಬ್ಬರು ಕ್ರಮವಾಗಿ ಹರ್ಷವರ್ಧನ್ ಹಾಗೂ ಪಿ.ಇನಿಯನ್ ವಿರುದ್ಧ 3ನೇ ಸುತ್ತಿನಲ್ಲಿ ಜಯಶಾಲಿಯಾದರು.







