ಚೆನ್ನೈಗೆ 2029ರ ಏಶ್ಯನ್ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ ಆತಿಥ್ಯ

ಸಾಂದರ್ಭಿಕ ಚಿತ್ರ | Photo Credit : X
ಚೆನ್ನೈ, ನ. 11: 2029ರ ಏಶ್ಯನ್ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ನ ಆತಿಥ್ಯವನ್ನು ಚೆನ್ನೈ ವಹಿಸಲಿದೆ ಎಂದು ಏಶ್ಯನ್ ಅತ್ಲೆಟಿಕ್ಸ್ ಅಸೋಸಿಯೇಷನ್ ಮಂಗಳವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ. ಹೊಸದಿಲ್ಲಿ (1989), ಪುಣೆ (2013) ಮತ್ತು ಭುವನೇಶ್ವರ (2017) ಬಳಿಕ ಭಾರತವು ಈ ಕ್ರೀಡಾಕೂಟವನ್ನು ನಾಲ್ಕನೇ ಬಾರಿ ಆಯೋಜಿಸುತ್ತಿದೆ.
‘‘ಸರಕಾರವು ಖಾತರಿ ಪತ್ರಗಳನ್ನು ಸಲ್ಲಿಸುವ ಷರತ್ತಿಗೆ ಒಳಪಟ್ಟು, ತಮಿಳುನಾಡಿನ ಚೆನ್ನೈಗೆ 2029ರ ಏಶ್ಯನ್ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ನ ಆತಿಥ್ಯವನ್ನು ನೀಡಲು ಏಶ್ಯನ್ ಅತ್ಲೆಟಿಕ್ಸ್ ಅಸೋಸಿಯೇಷನ್ ಸಂತೋಷಪಡುತ್ತದೆ’’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಂಗಳವಾರ ನಡೆದ ಏಶ್ಯನ್ ಅತ್ಲೆಟಿಕ್ಸ್ ಫೆಡರೇಶನ್ ಕೌನ್ಸಿಲ್ ಸಭೆಯಲ್ಲಿ ಪಾಲ್ಗೊಂಡ ನಂತರ ಟೋಕಿಯೊದಿಂದ ಮಾತನಾಡಿದ TNA ಮತ್ತು ತಮಿಳುನಾಡು ಸರಕಾರದ ಪ್ರತಿನಿಧಿ ಲತಾ ಈ ವಿಷಯವನ್ನು ತಿಳಿಸಿದರು.
‘‘ನಾವು ನಮ್ಮ ಪ್ರಾತ್ಯಕ್ಷಿಕೆಯನ್ನು ನೀಡಿದೆವು. ನೆಹರು ಕ್ರೀಡಾಂಗಣವು ಅಂತರರಾಷ್ಟ್ರೀಯ ಕೂಟಗಳನ್ನು ಆಯೋಜಿಸಿದ ಪರಂಪರೆ ಹಾಗೂ ನೆಹರು 'ಬಿ' ಮೈದಾನದಲ್ಲಿ ಲಭ್ಯವಿರುವ ಅಭ್ಯಾಸ ಸೌಲಭ್ಯಗಳ ಕುರಿತು ನಾವು ವಿವರಗಳನ್ನು ನೀಡಿದೆವು’’ ಎಂದು ಲತಾ ಹೇಳಿದರು.




