ಚೆಸ್: ಭಾರತದ ಗುಕೇಶ್ ಈಗ ವಿಶ್ವದ ನಂ. 3 ಆಟಗಾರ

ಗುಕೇಶ್ | PC : X \ @DGukesh
ಹೊಸದಿಲ್ಲಿ: ಯುವ ಚೆಸ್ ಪ್ರತಿಭೆ ಹಾಗೂ ವಿಶ್ವದ ಅತ್ಯಂತ ಕಿರಿಯ ಚಾಂಪಿಯನ್ ಎನಿಸಿರುವ ಗುಕೇಶ್ ದೊಮ್ಮರಾಜು ವಿಜ್ಕ್ ಆನ್ ಝೀನಲ್ಲಿ ನಡೆಯುತ್ತಿರುವ ಟಾಟಾ ಸ್ಟೀಲ್ ಚೆಸ್ ಟೂರ್ನಿಯ 11ನೇ ಪಂದ್ಯದಲ್ಲಿ ಚೀನಾದ ವೀ ಯೀ ವಿರುದ್ಧ ಡ್ರಾ ಸಾಧಿಸುವ ಮೂಲಕ ವಿಶ್ವ ರ್ಯಾಂಕಿಂಗ್ನಲ್ಲಿ 3ನೇ ಸ್ಥಾನಕ್ಕೇರಿದರು.
ಏತನ್ಮಧ್ಯೆ ಅಗ್ರ ಶ್ರೇಯಾಂಕದ ಫ್ಯಾಬಿಯಾನೊ ಕರೂನಾ ವಿರುದ್ಧ ಭಾರತದ ರಮೇಶ್ಬಾಬು ಪ್ರಜ್ಞಾನಂದ ಗೆಲುವು ಸಾಧಿಸಿದರು. ಗುರುವಾರದ ವಿಶ್ರಾಂತಿಯ ಬಳಿಕ ಗುಕೇಶ್ ಹಾಲಿ ಚಾಂಪಿಯನ್ ವಿರುದ್ಧ ಕಠಿಣ ಪರೀಕ್ಷೆಯನ್ನು ಎದುರಿಸಿದರು. ಬಿಳಿಕಾಯಿಗಳೊಂದಿಗೆ ಆಡಿದ ಗುಕೇಶ್, ಕಿಂಗ್ಸ್ ಪಾನ್ ಆರಂಭದೊಂದಿಗೆ ಶಾಸ್ತ್ರೀಯ ಇಟಾಲಿಯನ್ ವಿಧಾನಕ್ಕೆ ಮೊರೆ ಹೋದರು. ಉಭಯ ಆಟಗಾರರು ಆಕ್ರಮಣಕಾರಿ ಪ್ರದರ್ಶನ ನೀಡಿದರು. ಆದರೆ ಪಂದ್ಯ ಸಾಗಿದಂತೆ ಸಮಬಲದ ಹೋರಾಟ ಪ್ರದರ್ಶಿಸಿ ಡ್ರಾಗೆ ಸಮ್ಮತಿ ಸೂಚಿಸಿದರು. ಒಟ್ಟು 11 ಪಂದ್ಯಗಳಿಂದ 8 ಅಂಕ ಹೊಂದಿರುವ ಗುಕೇಶ್ ಟೂರ್ನಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ದಿನದ ಇನ್ನೊಂದು ಅಚ್ಚರಿಯ ಫಲಿತಾಂಶದಲ್ಲಿ ಪ್ರಜ್ಞಾನಂದ ಅವರು ಅಗ್ರ ಕ್ರಮಾಂಕದ ಆಟಗಾರ ಕರೂನಾ ವಿರುದ್ಧ ಅಧಿಕಾರಯುಕ್ತ ಗೆಲುವು ಸಾಧಿಸಿದರು. ಕಪ್ಪು ಕಾಯಿಗಳೊಂದಿಗೆ ಆಡಿದ ಪ್ರಜ್ಞಾನಂದ, ಎದುರಾಳಿಯ ಇಂಗ್ಲಿಷ್ ಆರಂಭದ ಶೈಲಿಗೆ ಪ್ರತಿಯಾಗಿ ಅಗಿನ್ಕೋರ್ಟ್ ಡಿಫೆನ್ಸ್ ಶೈಲಿಯನ್ನು ಪ್ರದರ್ಶಿಸಿ, ಪಂದ್ಯದಲ್ಲಿ ನಿಯಂತ್ರಣ ಸಾಧಿಸಿದರು.
ಇಂದಿನ ಗೆಲುವಿನೊಂದಿಗೆ ಗುಕೇಶ್, ಕರೂನಾ ಅವರನ್ನು ಹಿಂದಿಕ್ಕಿ ವಿಶ್ವ ರ್ಯಾಂಕಿಂಗ್ನಲ್ಲಿ 2793.2 ಎಲೋ ಅಂಕಗಳೊಂದಿಗೆ 3ನೇ ಸ್ಥಾನಕ್ಕೇರಿದರು. ಕರೂನಾ 2792.4 ಅಂಕ ಪಡೆದು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು.
11 ಸುತ್ತಿನ ಬಳಿಕ ಗುಕೇಶ್ (8.00) ಅಗ್ರಸ್ಥಾನದಲ್ಲಿದ್ದರೆ ರಮೇಶ್ಬಾಬು ಪ್ರಜ್ಞಾನಂದ (7.5) ಮತ್ತು ನೊದಿರ್ಬೆಕ್ (7.5) ಎರಡನೇ ಸ್ಥಾನದಲ್ಲಿದ್ದಾರೆ. ವ್ಲಾದಿಮಿರ್ ಪೆಡಸೀವ್, ಅನೀಶ್ ಗಿರಿ, ವೀ ಯೀ ತಲಾ 6 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.







