23 ವರ್ಷಗಳಲ್ಲಿ ಮೊದಲ ಬಾರಿ ಚೆಸ್ ವಿಶ್ವಕಪ್ ಗೆ ಭಾರತದ ಆತಿಥ್ಯ

ಆರ್.ಪ್ರಜ್ಞಾನಂದ , ಡಿ.ಗುಕೇಶ್ | PC : X
ಹೊಸದಿಲ್ಲಿ, ಜು.21: ‘ಭಾರತವು ಈ ವರ್ಷದ ಚೆಸ್ ವಿಶ್ವಕಪ್ ಪಂದ್ಯಾವಳಿಯನ್ನು ಅಕ್ಟೋಬರ್ 30ರಿಂದ ನವೆಂಬರ್ 27ರ ತನಕ ಆಯೋಜಿಸಲಿದ್ದು, ಈ ಟೂರ್ನಿಯ ಆತಿಥೇಯ ನಗರದ ಹೆಸರನ್ನು ಸೂಕ್ತ ಸಮಯದಲ್ಲಿ ಹೆಸರಿಸಲಾಗುವುದು’ ಎಂದು ಜಾಗತಿಕ ಚೆಸ್ ಅಡಳಿತ ಮಂಡಳಿ ಫಿಡೆ ಸೋಮವಾರ ಪ್ರಕಟಿಸಿದೆ.
ಪಂದ್ಯಾವಳಿಯಲ್ಲಿ 206 ಆಟಗಾರರು ಪ್ರತಿಷ್ಠಿತ ಪ್ರಶಸ್ತಿಗಾಗಿ ಹೋರಾಡಲಿದ್ದಾರೆ. 2026ರ ಫಿಡೆ ಕ್ಯಾಂಡಿಡೇಟ್ಸ್ ಟೂರ್ನಮೆಂಟ್ ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದ್ದಾರೆ. ಈ ಹಿಂದೆ ಭಾರತವು 2002ರಲ್ಲಿ ಚೆಸ್ ವಿಶ್ವಕಪ್ ನ ಆತಿಥ್ಯವಹಿಸಿತ್ತು. ಹೈದರಾಬಾದ್ ನಲ್ಲಿ ನಡೆದಿದ್ದ ಪಂದ್ಯಾವಳಿಯಲ್ಲಿ ವಿಶ್ವನಾಥನ್ ಆನಂದ್ ಪ್ರಶಸ್ತಿ ಜಯಿಸಿದ್ದರು. ಇದೀಗ 23 ವರ್ಷಗಳ ನಂತರ ಮೊದಲ ಬಾರಿ ಚೆಸ್ ಟೂರ್ನಿಯನ್ನು ಭಾರತ ತಂಡವು ಆಯೋಜಿಸಲಿದೆ.
ಆಟಗಾರರು ನಾಕೌಟ್ ಮಾದರಿಯಲ್ಲಿ ಆಡಲಿದ್ದು, ಪ್ರತೀ ಸುತ್ತಿನಲ್ಲಿ ಸೋಲುವ ಆಟಗಾರ ಸ್ಪರ್ಧೆಯಿಂದ ನಿರ್ಗಮಿಸಲಿದ್ದಾರೆ.
‘ವಿಶ್ವಕಪ್ ಟೂರ್ನಿಯಲ್ಲಿ ಹಿಂದಿನ ಕೆಲವು ವರ್ಷಗಳಲ್ಲಿ ಹಲವು ಮಾದರಿಗಳನ್ನು ಬಳಸಲಾಗಿದೆ. ಆದರೆ 2021ರಿಂದ ಏಕೈಕ ಎಲಿಮಿನೇಶನ್ ಮಾದರಿಯನ್ನು ಅನುಸರಿಸುತ್ತಿದೆ. ಪ್ರತೀ ಸುತ್ತು 3 ದಿನಗಳ ತನಕ ಇರುತ್ತದೆ. ಮೊದಲೆರಡು ದಿನಗಳಲ್ಲಿ ಎರಡು ಕ್ಲಾಸಿಕಲ್ ಗೇಮ್ಗಳು ನಡೆಯಲಿವೆ. ಆ ನಂತರ ಅಗತ್ಯವಿದ್ದರೆ 3ನೇ ದಿನ ಟೈ-ಬ್ರೇಕರ್ ಪಂದ್ಯ ನಡೆಯಲಿದೆ’ ಎಂದು ಫಿಡೆ ತಿಳಿಸಿದೆ.
ಮೊದಲ ಸುತ್ತಿನಲ್ಲಿ ಅಗ್ರ-50 ಆಟಗಾರರಿಗೆ ಬೈ ನೀಡಲಾಗುತ್ತದೆ. ಆದರೆ 51ರಿಂದ 206ರ ತನಕದ ಶ್ರೇಯಾಂಕಿತ ಆಟಗಾರರು ಸ್ಪರ್ಧಿಸುತ್ತಾರೆ.
ಹಾಲಿ ವಿಶ್ವ ಚಾಂಪಿಯನ್ ಡಿ.ಗುಕೇಶ್, 2023ರ ವಿಶ್ವಕಪ್ ನ ರನ್ನರ್ಸ್ ಅಪ್ ಆರ್.ಪ್ರಜ್ಞಾನಂದ, ವಿಶ್ವದ 5ನೇ ರ್ಯಾಂಕಿನ ಆಟಗಾರ ಅರ್ಜುನ್ ಎರಿಗೈಸಿ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ಸ್ಟಾರ್ ಚೆಸ್ ಆಟಗಾರರಾಗಿದ್ದಾರೆ. ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್ ಸನ್ ಕೂಡ ಸ್ಪರ್ಧಾವಳಿಗೆ ಅರ್ಹತೆ ಪಡೆದಿದ್ದಾರೆ. 2023ರಲ್ಲಿ ಕಾರ್ಲ್ ಸನ್ ವಿಶ್ವಕಪ್ ಗೆದ್ದಿದ್ದರು.
ಭಾರತವು 2022ರ ಚೆಸ್ ಒಲಿಂಪಿಯಾಡ್, ಟಾಟಾ ಸ್ಟೀಲ್ ಚೆಸ್ ಇಂಡಿಯಾ, 2024ರ ವಿಶ್ವ ಜೂನಿಯರ್ ಅಂಡರ್-20 ಚಾಂಪಿಯನ್ ಶಿಪ್ ಹಾಗೂ ಈ ವರ್ಷದ ಎಪ್ರಿಲ್ ನಲ್ಲಿ 5ನೇ ಆವೃತ್ತಿಯ ಫಿಡೆ ಮಹಿಳೆಯರ ಗ್ರ್ಯಾನ್ಪ್ರಿ ಟೂರ್ನಿಯನ್ನು ಆಯೋಜಿಸಿತ್ತು.
‘‘ ಚೆಸ್ ಬಗ್ಗೆ ತೀವ್ರ ಉತ್ಸಾಹ ಹಾಗೂ ಬೆಂಬಲ ಹೊಂದಿರುವ ದೇಶವಾದ ಭಾರತಕ್ಕೆ ಫಿಡೆ ವಿಶ್ವಕಪ್-2025 ಅನ್ನು ತರಲು ನಮಗೆ ರೋಮಾಂಚನವಾಗುತ್ತಿದೆ. ಭಾರತೀಯ ಚೆಸ್ ಅಭಿಮಾನಿಗಳ ಉತ್ಸಾಹ ಯಾವಾಗಲೂ ಗಮನಾರ್ಹವಾಗಿದ್ದು, ಸ್ಥಳೀಯ ಚೆಸ್ ಪ್ರೇಮಿಗಳಿಂದ ವಿಶ್ವಕಪ್ ಟೂರ್ನಿಗೆ ಆನ್-ಸೈಟ್ ಹಾಗೂ ಆನ್ಲೈನ್ ನಲ್ಲಿ ಹೆಚ್ಚಿನ ಆಸಕ್ತಿಯನ್ನು ನಿರೀಕ್ಷಿಸುತ್ತಿದ್ದೇವೆ’’ ಎಂದು ಫಿಡೆ ಸಿಇಒ ಎಮಿಲ್ ಸುಟೋವ್ಸ್ಕಿ ಪತ್ರಿಕಾ ಪ್ರಕಟನೆಯೊಂದರಲ್ಲಿ ತಿಳಿಸಿದ್ದಾರೆ.







