ಚೆಸ್ ವಿಶ್ವಕಪ್ | ಅರ್ಜುನ್, ಹರಿಕೃಷ್ಣ ಪ್ರಿಕ್ವಾರ್ಟರ್ ಫೈನಲ್ಗೆ : ಪ್ರಜ್ಞಾನಂದಗೆ ಸೋಲು

ಪ್ರಜ್ಞಾನಂದ | Photo Credit : PTI
ಅರ್ಪೋರ (ಗೋವಾ), ನ. 13: ಗೋವಾದ ಅರ್ಪೋರದಲ್ಲಿ ನಡೆಯುತ್ತಿರುವ ಚೆಸ್ ವಿಶ್ವಕಪ್ನಲ್ಲಿ ಗುರುವಾರ ನಡೆದ ನಾಲ್ಕನೇ ಸುತ್ತಿನ ಪಂದ್ಯಗಳಲ್ಲಿ ಅರ್ಜುನ್ ಎರಿಗೈಸಿ ಮತ್ತು ಪೆಂಟಾಲ ಹರಿಕೃಷ್ಣ ಭಾರತೀಯ ಅಭಿಯಾನವನ್ನು ಜೀವಂತವಾಗಿಟ್ಟಿದ್ದಾರೆ. ಅದೇ ವೇಳೆ, ಕಳೆದ ಆವೃತ್ತಿಯ ರನ್ನರ್ಸ್-ಅಪ್ ಆರ್. ಪ್ರಜ್ಞಾನಂದ ಟೈಬ್ರೇಕ್ನಲ್ಲಿ ಸೋಲನುಭವಿಸಿದ್ದಾರೆ.
ಮೂರನೇ ಶ್ರೇಯಾಂಕದ ಅರ್ಜುನ್ ಹಂಗೇರಿಯ ಗ್ರ್ಯಾಂಡ್ಮಾಸ್ಟರ್ ಪೀಟರ್ ಲೆಕೊ ಅವರನ್ನು ಎರಡೂ ರ್ಯಾಪಿಡ್ ಪಂದ್ಯಗಳಲ್ಲಿ ಸೋಲಿಸಿ ಅಂತಿಮ 16ರ ಸುತ್ತಿನಲ್ಲಿ ಸ್ಥಾನ ಪಡೆದಿದ್ದಾರೆ. ಈ ಸುತ್ತಿನಲ್ಲಿ ಅವರು ಅಮೆರಿಕದ ಲೆವನ್ ಅರೋನಿಯನ್ರನ್ನು ಎದುರಿಸಲಿದ್ದಾರೆ.
ಐದನೇ ಸುತ್ತಿನ ಕ್ಲಾಸಿಕಲ್ ಪಂದ್ಯಗಳಲ್ಲಿ ಪ್ರಣವ್ ವಿ. ಮತ್ತು ಕಾರ್ತಿಕ್ ವೆಂಕಟರಮಣ್ ಸೋಲನುಭವಿಸಿದರು. ಟೈಬ್ರೇಕ್ನಲ್ಲಿ ಮೂವರು ಭಾರತೀಯರಿದ್ದು, ಇಬ್ಬರು ಮುಂದಿನ ಸುತ್ತಿಗೆ ತೇರ್ಗಡೆಯಾಗಿದ್ದಾರೆ.
ಮೊದಲ ರ್ಯಾಪಿಡ್ ಗೇಮ್ನಲ್ಲಿ ಸ್ವೀಡನ್ನ ನೀಲ್ಸ್ ಗ್ರಾಂಜೆಲಿಯಸ್ರನ್ನು ಹರಿಕೃಷ್ಣ ಡ್ರಾಕ್ಕೆ ಹಿಡಿದಿಟ್ಟರು. ಬಳಿಕ ಎರಡನೇ ರ್ಯಾಪಿಡ್ ಗೇಮ್ನಲ್ಲಿ ಅವರು ಗೆಲುವು ಪಡೆದರು. ಪ್ರಿಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು ಮೆಕ್ಸಿಕೊದ ಜೋಸ್ ಎಡ್ವಾರ್ಡೊ ಮಾರ್ಟಿನೇಝ್ ಅಲ್ಕಾಂಟಾರ ಅವರನ್ನು ಎದುರಿಸಲಿದ್ದಾರೆ.
ಎರಡನೇ ಶ್ರೇಯಾಂಕದ ಪ್ರಜ್ಞಾನಂದರನ್ನು ರಶ್ಯದ ಡನೀಲ್ ಡುಬೊವ್ ಸೋಲಿಸಿದರು. ಮೊದಲ ರ್ಯಾಪಿಡ್ ಗೇಮ್ ಡ್ರಾದಲ್ಲಿ ಮುಕ್ತಾಯಗೊಂಡ ಬಳಿಕ ಎರಡನೇ ರ್ಯಾಪಿಡ್ ಗೇಮ್ನಲ್ಲಿ ಡನೀಲ್, ಪ್ರಜ್ಞಾನಂದರನ್ನು ಸೋಲಿಸಿದರು.







