ಚೆಸ್ ವಿಶ್ವಕಪ್ :ಟೈ ಬ್ರೇಕರ್ ಎಂದರೇನು? ಇಲ್ಲಿದೆ ಮಾಹಿತಿ
ಪ್ರಶಸ್ತಿಗಾಗಿ ಇಂದು ಪ್ರಜ್ಞಾನಂದ-ಕಾರ್ಲ್ ಸನ್ ಕಾದಾಟ

Photo: Twitter
ಬಾಕು: ಚೆಸ್ ವಿಶ್ವಕಪ್ ಇದೀಗ ರೋಚಕ ಘಟ್ಟ ತಲುಪಿದೆ. ಮೊದಲ 2 ಕ್ಲಾಸಿಕ್ ಗೇಮ್ ಗಳನ್ನು ಡ್ರಾ ಮಾಡಿಕೊಂಡಿರುವ ಭಾರತದ ಯುವ ಚೆಸ್ ತಾರೆ ಆರ್.ಪ್ರಜ್ಞಾನಂದ ಹಾಗೂ ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್ ಸನ್ ಅವರು ಇಂದು ಟೈ ಬ್ರೇಕರ್ ಪಂದ್ಯದಲ್ಲಿ ಆಡಲಿದ್ದಾರೆ. ಟೈ ಬ್ರೇಕರ್ ನಲ್ಲಿ ಪಂದ್ಯದ ವಿಜೇತರನ್ನು ನಿರ್ದರಿಸಲಾಗುತ್ತದೆ.
ಬುಧವಾರ ಕಾರ್ಲ್ ಸನ್ ಹಾಗೂ ಪ್ರಜ್ಞಾನಂದ ನಡುವೆ ನಡೆದ ತೀವ್ರ ಪೈಪೋಟಿಯಿಂದ ಕೂಡಿದ್ದ 2ನೇ ಪಂದ್ಯವು 30 ನಡೆಗಳ ಬಳಿಕ ಡ್ರಾನಲ್ಲಿ ಕೊನೆಗೊಂಡಿತು.
ಟೈ ಬ್ರೇಕರ್ ನಲ್ಲಿ ಇಬ್ಬರೂ ತಲಾ 10 ನಿಮಿಷಗಳ 2 ರ್ಯಾಪಿಡ್ ಗೇಮ್ ಅನ್ನು ಆಡಲಿದ್ದಾರೆ. ಇಲ್ಲಿಯೂ ವಿಜೇತರ ನಿರ್ಧಾರವಾಗದೇ ಇದ್ದರೆ ಮತ್ತೆ ತಲಾ 5 ನಿಮಿಷಗಳ 2 ರ್ಯಾಪಿಡ್ ಗೇಮ್ ಗಳ ಅವಕಾಶ ನೀಡಲಾಗುತ್ತದೆ. ಈ ರ್ಯಾಪಿಡ್ ಗೇಮ್ ಗಳೂ ಡ್ರಾಗೊಂಡರೆ ಸಡನ್ ಡೆತ್ ಮೂಲಕ ಒಂದು ಬ್ಲಿಟ್ಜ್ ಗೇಮ್ ಆಡಲಾಗುತ್ತದೆ. ಇಲ್ಲಿ ಗೆದ್ದವರು ಚಾಂಪಿಯನ್ ಆಗಿ ಹೊರಹೊಮ್ಮುತ್ತಾರೆ. ಹೀಗಾಗಿ ಗುರುವಾರದ ಚದುರಂಗದ ಕಾದಾಟ ಅತ್ಯಂತ ರೋಚಕವಾಗಿ ಸಾಗುವ ನಿರೀಕ್ಷೆ ಇದೆ.
ಸೆಮಿ ಫೈನಲ್ ನಲ್ಲೂ ತಮಿಳುನಾಡಿನ ಪ್ರಜ್ಞಾನಂದ ಟೈ ಬ್ರೇಕರ್ ನಲ್ಲಿ ಗೆಲುವು ಸಾಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.