3ನೇ ದಿನದಾಟಕ್ಕಿಂತ ಮೊದಲು ಲಾರ್ಡ್ಸ್ನಲ್ಲಿ ಗಂಟೆ ಬಾರಿಸಿದ ಚೇತೇಶ್ವರ ಪೂಜಾರ

ಚೇತೇಶ್ವರ ಪೂಜಾರ | PC : BCCI
ಲಂಡನ್: ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಮೂರನೇ ಟೆಸ್ಟ್ ಪಂದ್ಯದ 3ನೇ ದಿನದಾಟ ಆರಂಭವಾಗುವ ಮೊದಲು ಭಾರತದ ಹಿರಿಯ ಟೆಸ್ಟ್ ಕ್ರಿಕೆಟಿಗ ಚೇತೇಶ್ವರ ಪೂಜಾರ ಲಾರ್ಡ್ಸ್ ಪೆವಿಲಿಯನ್ ನಲ್ಲಿರುವ ಗಂಟೆಯನ್ನು ಬಾರಿಸಿದರು.
ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಬೆಲ್ ಬಾರಿಸುವ ಗೌರವ ಪಡೆದ ಭಾರತದ ಕೆಲವೇ ಸಕ್ರಿಯ ಅಂತರರಾಷ್ಟ್ರೀಯ ಕ್ರಿಕೆಟಿಗರ ಪೈಕಿ ಪೂಜಾರ ಒಬ್ಬರಾಗಿದ್ದಾರೆ.
ಭಾರತದ ಮಹಿಳೆಯರ ಕ್ರಿಕೆಟ್ ತಂಡದ ಆಲ್ರೌಂಡರ್ ದೀಪ್ತಿ ಶರ್ಮಾ 2021ರಲ್ಲಿ ಬೆಲ್ ಬಾರಿಸಿದ್ದರು. ಈ ಗೌರವ ಪಡೆದ ಭಾರತೀಯ ಮಹಿಳಾ ಕ್ರಿಕೆಟಿಗರ ಪೈಕಿ ಒಬ್ಬರಾಗಿದ್ದರು.
ಲಾರ್ಡ್ಸ್ ಪೆವಿಲಿಯನ್ ನಲ್ಲಿರುವ ಬೆಲ್ ಅನ್ನು 2007ರಿಂದ ಕ್ರಿಕೆಟ್ ಲೆಜೆಂಡ್ ಗಳು, ಗಣ್ಯರು ಹಾಗೂ ಕ್ರೀಡಾ ಐಕಾನ್ ಗಳು ಬಾರಿಸುತ್ತಾ ಬಂದಿದ್ದಾರೆ.
ಭಾರತದ ಪರ 103 ಟೆಸ್ಟ್ ಪಂದ್ಯಗಳನ್ನು ಆಡಿರುವ ಪೂಜಾರ 176 ಇನಿಂಗ್ಸ್ಗಳಲ್ಲಿ 43.60ರ ಸರಾಸರಿಯಲ್ಲಿ 7,195 ರನ್ ಗಳಿಸಿದ್ದಾರೆ. ಔಟಾಗದೆ 206 ಗರಿಷ್ಠ ಸ್ಕೋರ್ ಆಗಿದೆ.
ತಾಳ್ಮೆಯ ಇನಿಂಗ್ಸ್ಗೆ ಖ್ಯಾತಿ ಪಡೆದಿರುವ ಪೂಜಾರ 19 ಶತಕ ಹಾಗೂ 35 ಅರ್ಧಶತಕಗಳನ್ನು ಗಳಿಸಿದ್ದಾರೆ. ಬಲಗೈ ಬ್ಯಾಟರ್ ಟೆಸ್ಟ್ ಕ್ರಿಕೆಟ್ನಲ್ಲಿ 863 ಬೌಂಡರಿಗಳು ಹಾಗೂ 16 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ. 66 ಕ್ಯಾಚ್ ಗಳನ್ನು ಪಡೆದಿದ್ದಾರೆ.
ಗುರುವಾರ ಆರಂಭವಾದ 3ನೇ ಟೆಸ್ಟ್ ಪಂದ್ಯದ ಮೊದಲ ದಿನ ಲಾರ್ಡ್ಸ್ ಕ್ರೀಡಾಂಗಣ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡುಲ್ಕರ್ ಅವರು ತನ್ನ ಭವ್ಯ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿ ಬೆಲ್ ಬಾರಿಸಿದ್ದರು.







