ಕಾಫಾ ನೇಷನ್ಸ್ ಕಪ್ | ಚೆಟ್ರಿ ಕೈ ಬಿಟ್ಟಿದ್ದಕ್ಕೆ ಸ್ಪಷ್ಟನೆ ನೀಡಿದ ಖಾಲಿದ್ ಜಮೀಲ್

Credit: X
ಬೆಂಗಳೂರು: ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಮಹತ್ವದ ಏಶಿಯನ್ ಕಪ್ ಅರ್ಹತಾ ಸುತ್ತಿನ ಪಂದ್ಯಗಳಿಗೂ ಮುನ್ನ ಕಾಫಾ ನೇಷನ್ಸ್ ಕಪ್ ಕೇವಲ ಪೂರ್ವಭಾವಿ ಸಿದ್ಧತೆಯ ಟೂರ್ನಮೆಂಟ್ ಆಗಿರುವುದರಿಂದ, ಸುನೀಲ್ ಚೆಟ್ರಿ ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂದು ಭಾರತ ತಂಡದ ನೂತನ ಮುಖ್ಯ ಕೋಚ್ ಖಾಲಿದ್ ಜಮೀಲ್ ಸ್ಪಷ್ಟಪಡಿಸಿದ್ದಾರೆ.
ಕಳೆದ ತಿಂಗಳು ಮನೋಲಾ ಮಾರ್ಕ್ವೆಝ್ ಬದಲಿಗೆ ಭಾರತ ತಂಡದ ನೂತನ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವ ಖಾಲಿದ್ ಜಮೀಲ್, ತಜಿಕಿಸ್ತಾನ್ ಹಾಗೂ ಉಝ್ಬೆಕಿಸ್ತಾನ್ ನಲ್ಲಿ ನಡೆಯಲಿರುವ ಮುಂಬರುವ ಕಾಫಾ ನೇಷನ್ಸ್ ಕಪ್ ಗೆ 35 ಮಂದಿ ಸಂಭಾವ್ಯ ಆಟಗಾರರ ಪಟ್ಟಿಯನ್ನು ಪ್ರಕಟಿಸಿದ್ದು, ಈ ಪಟ್ಟಿಯಲ್ಲಿ ಹಿರಿಯ ಆಟಗಾರ ಸುನೀಲ್ ಚೆಟ್ರಿ ಹೆಸರು ಕಾಣೆಯಾಗಿದೆ. ಇದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
ಈ ಕುರಿತು ಖಾಲಿದ್ ಜಮೀಲ್ ಹೆಚ್ಚೇನೂ ವಿವರ ಹಂಚಿಕೊಳ್ಳದಿದ್ದರೂ, ಅಕ್ಟೋಬರ್ 9 (ವಿದೇಶ) ಹಾಗೂ ಅಕ್ಟೋಬರ್ 14 (ಸ್ವದೇಶ) ರಂದು ಸಿಂಗಾಪುರ ವಿರುದ್ಧ ನಡೆಯಲಿರುವ ಏಶಿಯನ್ ಕಪ್ ಅರ್ಹತಾ ಪಂದ್ಯಗಳಲ್ಲಿ ರಾಷ್ಟ್ರೀಯ ತಂಡಕ್ಕೆ ಸುನೀಲ್ ಚೆಟ್ರಿ ಮರಳುವ ನಿರೀಕ್ಷೆ ಇದೆ ಎಂಬ ಸುಳಿವು ನೀಡಿದ್ದಾರೆ.
“ಕಾಫಾ ನೇಷನ್ಸ್ ಟೂರ್ನಮೆಂಟ್ ಏಶಿಯನ್ ಕಪ್ ಅರ್ಹತಾ ಸುತ್ತಿಗೆ ಪೂರ್ವಭಾವಿ ಸಿದ್ಧತೆಯ ಅಗತ್ಯವನ್ನು ಪೂರೈಸಲಿರುವುದರಿಂದ ಮಾತ್ರ ಸುನೀಲ್ ಚೆಟ್ರಿ ಅವರು ಕಾಫಾ ನೇಷನ್ಸ್ ಕಪ್ ಟೂರ್ನಮೆಂಟ್ ನ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿಲ್ಲ” ಎಂದು ಖಾಲಿದ್ ಜಮೀಲ್ ಹೇಳಿದ್ದಾರೆ.
ಅವರು ಬೆಂಗಳೂರಿನ ರಾಷ್ಟ್ರೀಯ ಶಿಬಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
“ಫೀಫಾಗೆ ಅವಕಾಶ ಒದಗಿಸಲಿರುವ ಈ ಟೂರ್ನಮೆಂಟ್ ನಲ್ಲಿ ಕೆಲವು ಇನ್ನಿತರ ಆಟಗಾರರನ್ನು ಪ್ರಯತ್ನಿಸಲು ನಾನು ಬಯಸಿದ್ದೇನೆ. ಇದರ ಕುರಿತು ನಾನು ಅವರೊಂದಿಗೂ ಮಾತನಾಡಿದ್ದೇನೆ. ತಂಡದಲ್ಲಿ ಅವರಂತಹ ಆಟಗಾರರಿರುವುದು ಯಾವಾಗಲೂ ಸಂತಸದಾಯಕ ವಿಚಾರವಾಗಿದ್ದು, ಅವರಿಗೆ ಯಾವಾಗಲೂ ತಂಡದ ಬಾಗಿಲು ತೆರೆದಿದೆ” ಎಂದು ಸ್ಪಷ್ಟಪಡಿಸಿದ್ದಾರೆ.







