ಚೀನಾ ಮಾಸ್ಟರ್ಸ್ 2023 ಫೈನಲ್: ಸಾತ್ವಿಕ್-ಚಿರಾಗ್ಗೆ ಸೋಲು

ಸಾತ್ವಿಕ್-ಚಿರಾಗ್ | Photo: X
ಬೀಜಿಂಗ್: ಭಾರತದ ಶಟ್ಲರ್ಗಳಾದ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಚೀನಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ ರವಿವಾರ ನಡೆದ ಪುರುಷರ ಡಬಲ್ಸ್ ಫೈನಲ್ನಲ್ಲಿ ವಿಶ್ವದ ನಂ.1 ಜೋಡಿ ಲಿಯಾಂಗ್ ವೀ ಕೆಂಗ್ ಹಾಗೂ ವಾಂಗ್ ಚಾಂಗ್ ವಿರುದ್ಧ ಸೋತಿದ್ದಾರೆ.
ನ.1 ಶ್ರೇಯಾಂಕದ ಭಾರತದ ಜೋಡಿ ಒಂದು ಗಂಟೆ ಹಾಗೂ 9 ನಿಮಿಷಗಳ ಕಾಲ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಚೀನಾದ ಜೋಡಿ 19-21, 21-18, 19-21 ಗೇಮ್ಗಳ ಅಂತರದಿಂದ ಸೋತಿದೆ. ಮೊದಲ ಗೇಮ್ನ್ನು 19-21 ಅಂತರದಿಂದ ಸೋತು ಹಿನ್ನಡೆಯಲ್ಲಿದ್ದ ಭಾರತದ ಜೋಡಿ ಎರಡನೇ ಗೇಮ್ ಅನ್ನು 21-18 ಅಂತರದಿಂದ ಗೆದ್ದುಕೊಂಡು ಪ್ರತಿರೋಧ ಒಡ್ಡಿತು.
ನಿರ್ಣಾಯಕ ಗೇಮ್ನಲ್ಲಿ 1-8 ಹಿನ್ನಡೆಯಿಂದ ಚೇತರಿಸಿಕೊಳ್ಳಲು ಭಾರತ ಪ್ರಯತ್ನಿಸಿದರೂ ಚೀನಾದ ಜೋಡಿ ಅಂತಿಮವಾಗಿ 21-19 ಅಂತರದಿಂದ ಜಯಭೇರಿ ಬಾರಿಸಿತು.
ಭಾರತದ ಜೋಡಿ ಮೂರನೇ ಗೇಮ್ನಲ್ಲಿ 6 ಅಂಕ ಉಳಿಸಿದರು. ಆದರೆ ಇದು ಅಂತ್ಯದಲ್ಲಿ ಗಣನೆಗೆ ಬರಲಿಲ್ಲ.
ಸಾತ್ವಿಕ್-ಚಿರಾಗ್ಗೆ ತಮ್ಮ ಎರಡನೇ ಬಿಡಬ್ಲ್ಯುಎಫ್ ಸೂಪರ್-750 ಪ್ರಶಸ್ತಿ ಗೆಲ್ಲುವ ಅವಕಾಶವಿತ್ತು. ಆದರೆ ಪಂದ್ಯದುದ್ದಕ್ಕೂ ವಿಶ್ವದ ನಂ.1 ಜೋಡಿ ಲಿಯಾಂಗ್ ವೀ ಕೆಂಗ್ ಹಾಗೂ ವಾಂಗ್ರಿಂದ ತೀವ್ರ ಸ್ಪರ್ಧೆ ಎದುರಿಸಿದರು.
ಈ ಗೆಲುವಿನೊಂದಿಗೆ ಲಿಯಾಂಗ್ ಹಾಗೂ ವಾಂಗ್ ಅವರು ಏಶ್ಯನ್ ಗೇಮ್ಸ್ನಲ್ಲಿ ಭಾರತದ ಜೋಡಿ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಂಡರು. ಫೈನಲ್ನಲ್ಲಿ ಭಾರತದ ಶಟ್ಲರ್ಗಳು ತಮ್ಮ ಶ್ರೇಷ್ಠ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಲಿಯಾಂಗ್ ಹಾಗೂ ವಾಂಗ್ರಿಂದ ಸಾತ್ವಿಕ್ ಹೆಚ್ಚು ಒತ್ತಡಕ್ಕೆ ಒಳಗಾದರು.
ಸಾತ್ವಿಕ್ ಹಾಗೂ ಚಿರಾಗ್ 2023ನೇ ವರ್ಷದಲ್ಲಿ ಬ್ಯಾಡ್ಮಿಂಟನ್ ಏಶ್ಯನ್ ಚಾಂಪಿಯನ್ಶಿಪ್, ಇಂಡೋನೇಶ್ಯ ಸೂಪರ್-1000, ಕೊರಿಯಾ ಸೂಪರ್ 500, ಸ್ವಿಸ್ ಸೂಪರ್ 300 ಹಾಗೂ ಏಶ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಜಯಿಸಿದ್ದರು.







