ಚೀನಾ ಮಾಸ್ಟರ್ಸ್: ಸಾತ್ವಿಕ್-ಚಿರಾಗ್ ಸೆಮಿ ಫೈನಲ್ಗೆ ಲಗ್ಗೆ

Photo: BWF TV/Screengrab
ಹಾಂಕಾಂಗ್ : ಏಶ್ಯನ್ ಗೇಮ್ಸ್ ಚಾಂಪಿಯನ್ಗಳಾದ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಚೀನಾ ಮಾಸ್ಟರ್ಸ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ ಪುರುಷರ ಡಬಲ್ಸ್ ವಿಭಾಗದಲ್ಲಿ ಸೆಮಿ ಫೈನಲ್ ತಲುಪಿದ್ದಾರೆ.
ಶುಕ್ರವಾರ 46 ನಿಮಿಷಗಳ ಕಾಲ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಭಾರತದ ಜೋಡಿ ಸಾತ್ವಿಕ್-ಚಿರಾಗ್ ವಿಶ್ದದ ನಂ.13ನೇ ಇಂಡೋನೇಶ್ಯದ ಆಟಗಾರರಾದ ಲಿಯೊ ರೊಲಿ ಕಾರ್ನಾಂಡೊ ಹಾಗೂ ಡೇನಿಯಲ್ ಮಾರ್ಟಿನ್ರನ್ನು 21-16, 21-14 ಅಂತರದಿಂದ ಮಣಿಸಿದ್ದಾರೆ.
ಸಾತ್ವಿಕ್ ಹಾಗೂ ಚಿರಾಗ್ ಈ ವರ್ಷ ಇಂಡೋನೇಶ್ಯ ಸೂಪರ್ 1000, ಕೊರಿಯಾ ಸೂಪರ್ 500 ಹಾಗೂ ಸ್ವಿಸ್ ಸೂಪರ್ 300 ಪ್ರಶಸ್ತಿಗಳನ್ನು ಜಯಿಸಿದ್ದರು. ಸಾತ್ವಿಕ್ ಹಾಗೂ ಚಿರಾಗ್ ಮುಂದಿನ ಸುತ್ತಿನಲ್ಲಿ ಮತ್ತೊಂದು ಕ್ವಾರ್ಟರ್ ಫೈನಲ್ನಲ್ಲಿ ಜಯಶಾಲಿಯಾಗುವ ಚೀನಾದ ಜೋಡಿಗಳಾದ ಹಿ ಜಿ ಟಿಂಗ್ ಹಾಗೂ ರೆನ್ ಕ್ಸಿಯಾಂಗ್ ಯು ಅಥವಾ 8ನೇ ಶ್ರೇಯಾಂಕದ ಲಿಯು ಯು ಚೆನ್ ಹಾಗೂ ಕ್ಸೂ ಕ್ಸುಯಾನ್ ಯಿ ಅವರನ್ನು ಎದುರಿಸಲಿದ್ದಾರೆ.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವದ ಮಾಜಿ ನಂ.1 ಭಾರತದ ಜೋಡಿ ತಮ್ಮ ಸ್ಥಾನಗಳನ್ನು ಆಗಾಗ್ಗೆ ವಿನಿಮಯ ಮಾಡಿಕೊಳ್ಳುವ ಮೂಲಕ ಉತ್ತಮ ಸಮನ್ವಯತೆಯನ್ನು ಪ್ರದರ್ಶಿಸಿದರು. ಈ ಮೂಲಕ ಇಂಡೋನೇಶ್ಯದ ಪ್ರತಿಸ್ಪರ್ಧಿಗಳು ಒತ್ತಡಕ್ಕೆ ಸಿಲುವಂತೆ ಮಾಡಿತು.







