ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ : ಪಿ.ವಿ. ಸಿಂಧು, ಆಯುಷ್ ಶೆಟ್ಟಿ ಶುಭಾರಂಭ

ಪಿ.ವಿ. ಸಿಂಧು | Photo Credit : PTI
ಚಾಂಗ್ಝೌ, ಜು.22: ಸಹ ಆಟಗಾರ್ತಿ ಉನ್ನತಿ ಹೂಡಾ ವಿರುದ್ಧ ಮೂರು ಗೇಮ್ಗಳ ಅಂತರದಿಂದ ಜಯಶಾಲಿಯಾಗಿರುವ ಪಿ.ವಿ. ಸಿಂಧು 2026ರ ಆವೃತ್ತಿಯ ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ ತನ್ನ ಅಭಿಯಾನ ಆರಂಭಿಸಿದ್ದಾರೆ.
ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.15ನೇ ಆಟಗಾರ್ತಿ ಸಿಂಧು ಒಂದು ಗಂಟೆಯೊಳಗೆ ಹೂಡಾರನ್ನು 21-14, 9-21, 21-10 ಗೇಮ್ಗಳ ಅಂತರದಿಂದ ಮಣಿಸಿದರು.
ಇತ್ತೀಚೆಗಷ್ಟೇ ಜಪಾನ್ ಓಪನ್ನಲ್ಲಿ ಸಿಂಗಲ್ಸ್ ಪ್ರಶಸ್ತಿ ಜಯಿಸಿ ಇತಿಹಾಸ ನಿರ್ಮಿಸಿದ್ದ ಸಿಂಧು ಮುಂದಿನ ಸುತ್ತಿನಲ್ಲಿ ಚೀನಾದ ನಾಲ್ಕನೇ ಶ್ರೇಯಾಂಕದ ಚೆನ್ ಯು ಫೀ ಅವರನ್ನು ಎದುರಿಸಲಿದ್ದಾರೆ. ಚೆನ್ ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ನಟ್ಸುಕಿ ನಿಡೈರಾರನ್ನು ಮಣಿಸಿದ್ದರು.
ಆಯುಷ್ ಶೆಟ್ಟಿ ಪ್ರಿ-ಕ್ವಾರ್ಟರ್ ಫೈನಲ್ಗೆ: ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಆಯುಷ್ ಶೆಟ್ಟಿ ಅವರು ಮೊದಲ ಸುತ್ತಿನ ಪಂದ್ಯದಲ್ಲಿ ಇಂಡೋನೇಶ್ಯದ ವಿಶ್ವದ ನಂ.11ನೇ ಆಟಗಾರ ಅಲ್ವಿ ಫರ್ಹಾನ್ರನ್ನು ಮೂರು ಗೇಮ್ಗಳ ಅಂತರದಿಂದ ಮಣಿಸಿ ಶಾಕ್ ನೀಡಿದ್ದಾರೆ.
ಭಾರತದ ಯುವ ಶಟ್ಲರ್ ಆಯುಷ್ ಮಾಜಿ ಜೂನಿಯರ್ ಚಾಂಪಿಯನ್ ಫರ್ಹಾನ್ರನ್ನು 21-17, 5-21, 21-17 ಗೇಮ್ಗಳ ಅಂತರದಿಂದ ಮಣಿಸಿದರು. ಈ ಮೂಲಕ ಅಂತಿಮ-16ರ ಸುತ್ತಿನಲ್ಲಿ ಸ್ಥಾನ ಪಡೆದರು.
2023ರ ವಿಶ್ವ ಜೂನಿಯರ್ ಚಾಂಪಿಯನ್ಶಿಪ್ನ ಸೆಮಿ ಫೈನಲ್ ಪಂದ್ಯದಲ್ಲಿ ಆಯುಷ್ ಅವರು ಫರ್ಹಾನ್ಗೆ ಸೋತಿದ್ದರು.
ಭಾರತದ ಡಬಲ್ಸ್ ಜೋಡಿ ಚೀನಾದ ಆಟಗಾರರ ವಿರುದ್ಧ ಇಂದು ಕಠಿಣ ಸವಾಲು ಎದುರಿಸಿದರು. ರೋಹನ್ ಕಪೂರ್ ಹಾಗೂ ಋತ್ವಿಕಾ ಶಿವಾನಿ ಅವರು ಅಗ್ರ ಶ್ರೇಯಾಂಕದ ಜೋಡಿ ಯಾನ್ ಝಿ ಫೆಂಗ್ ಹಾಗೂ ಡಾಂಗ್ ಪಿಂಗ್ ಹ್ಯುಯಾಂಗ್ ವಿರುದ್ಧ 9-21, 16-21 ಗೇಮ್ಗಳ ಅಂತರದಿಂದ ಸೋತಿದ್ದಾರೆ.
ಧ್ರುವ ಕಪಿಲ ಹಾಗೂ ತನಿಶಾ ಕ್ರಾಸ್ಟೊ ಕೂಡ ಚೀನಾದ ಕ್ಸಿನ್ ವಾ ಗುವೊ ಹಾಗೂ ಫಾಂಗ್ ಹ್ಯುಯಿ ಚೆನ್ ವಿರುದ್ಧ 18-21, 18-21 ನೇರ ಗೇಮ್ಗಳ ಅಂತರದಿಂದ ಸೋತಿದ್ದಾರೆ.






