ಚೀನಾ ಓಪನ್: ಪಿ.ವಿ. ಸಿಂಧು ಪ್ರಿ-ಕ್ವಾರ್ಟರ್ ಫೈನಲ್ ಗೆ

ಪಿ.ವಿ. ಸಿಂಧು | PC : X
ಬೀಜಿಂಗ್, ಜು.23: ಡಬಲ್ ಒಲಿಂಪಿಯನ್ ಹಾಗೂ ಮಾಜಿ ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಜಪಾನಿನ ಆರನೇ ಶ್ರೇಯಾಂಕದ ಟೊಮೊಕಾ ಮಿಯಾಝಾಕಿ ಅವರನ್ನು ಮಣಿಸುವ ಮೂಲಕ ಚೀನಾ ಓಪನ್ ಸೂಪರ್-1000 ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ ಅಂತಿಮ-16ರ ಸುತ್ತು ಪ್ರವೇಶಿಸಿದ್ದಾರೆ.
ಕೇವಲ 62 ನಿಮಿಷಗಳಲ್ಲಿ ಕೊನೆಗೊಂಡ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ವಿಶ್ವದ 15ನೇ ರ್ಯಾಂಕಿನ ಸಿಂಧು ಅವರು ಮಿಯಾಝಾಕಿ ಅವರನ್ನು 21-15, 8-21, 21-17 ಗೇಮ್ಗಳ ಅಂತರದಿಂದ ಮಣಿಸಿದರು.
ಹೈದರಾಬಾದ್ ಆಟಗಾರ್ತಿ ಆರಂಭಿಕ ಗೇಮ್ ನಲ್ಲಿ ಪ್ರಾಬಲ್ಯ ಸಾಧಿಸಿದ್ದು, ಸತತ 7 ಪಾಯಿಂಟ್ಗಳನ್ನು ಕಬಳಿಸಿ ಗೇಮ್ ಗೆಲ್ಲುವ ಮೊದಲು 13-5ರಿಂದ ಮುನ್ನಡೆ ಸಾಧಿಸಿದರು.
2ನೇ ಗೇಮ್ನಲ್ಲಿ 18ರ ಹರೆಯದ ಮಿಯಾಝಾಕಿ ಪ್ರತಿರೋಧ ಒಡ್ಡಿದ್ದು,ಸತತ 9 ಅಂಕಗಳನ್ನು ಗಳಿಸಿ 12-8ರಿಂದ ಮುನ್ನಡೆ ಸಾಧಿಸಿದರು. ಅಂತಿಮವಾಗಿ 21-8 ಅಂತರದಿಂದ ಜಯ ಸಾಧಿಸಿ ಪಂದ್ಯವನ್ನು 1-1ರಿಂದ ಸಮಬಲಗೊಳಿಸಿದರು.
ನಿರ್ಣಾಯಕ 3ನೇ ಗೇಮ್ ನಲ್ಲಿ ಸಿಂಧು ಸಂಪೂರ್ಣ ಹಿಡಿತ ಸಾಧಿಸಿದ್ದು, ವಿಶ್ವದ ನಂ.6ನೇ ಆಟಗಾರ್ತಿಯ ಎದುರು ತನ್ನ 2ನೇ ಮುಖಾಮುಖಿಯಲ್ಲಿ ಜಯಭೇರಿ ಬಾರಿಸಿದರು.
ಕಳೆದ ವಾರ ಜಪಾನ್ ಓಪನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಕೊರಿಯಾದ ಸಿಮ್ ಯು ಜಿನ್ ವಿರುದ್ಧ 15-21, 14-21 ನೇರ ಗೇಮ್ಗಳ ಅಂತರದಿಂದ ಸೋಲನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಗೆಲುವು ಮಹತ್ವದ ಪಡೆದಿದೆ.
ಭಾರತೀಯ ಆಟಗಾರ್ತಿ ಈ ವರ್ಷ ಹಲವು ಟೂರ್ನಿಗಳಲ್ಲಿ ಬೇಗನೆ ನಿರ್ಗಮಿಸುವ ಮೂಲಕ ಸವಾಲನ್ನು ಎದುರಿಸಿದ್ದರು. ಇಂಡೋನೇಶ್ಯ ಓಪನ್, ಸಿಂಗಾಪುರ ಓಪನ್, ಮಲೇಶ್ಯ ಮಾಸ್ಟರ್ಸ್, ಏಶ್ಯನ್ ಚಾಂಪಿಯನ್ಶಿಪ್ಸ್, ಸ್ವಿಸ್ ಓಪನ್, ಆಲ್ ಇಂಗ್ಲೆಂಡ್ ಓಪನ್ ಹಾಗೂ ಇಂಡೋನೇಶ್ಯ ಮಾಸ್ಟರ್ಸ್ ಟೂರ್ನಿಗಳಲ್ಲಿ ಮೊದಲ ಅಥವಾ 2ನೇ ಸುತ್ತಿನಲ್ಲಿ ಸೋಲನುಭವಿಸಿದ್ದರು.
ಪುರುಷರ ಡಬಲ್ಸ್ ವಿಭಾಗದಲ್ಲಿ ವಿಶ್ವದ ನಂ.15ನೇ ಜೋಡಿ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಕೇವಲ 31 ನಿಮಿಷಗಳಲ್ಲಿ ಜಪಾನಿನ ಕೆನ್ಯಾ ಮಿಟ್ಸುಹಶಿ ಹಾಗೂ ಹಿರೊಕಿ ಒಕಮುರಾರನ್ನು 21-13, 21-9 ನೇರ ಗೇಮ್ಗಳ ಅಂತರದಿಂದ ಮಣಿಸಿದರು.
ವಿಶ್ವದ ಮಾಜಿ ನಂ.1 ಜೋಡಿ ಸಾತ್ವಿಕ್-ಚಿರಾಗ್ ಈ ವರ್ಷ ಮಲೇಶ್ಯ ಓಪನ್, ಇಂಡಿಯಾ ಓಪನ್ ಹಾಗೂ ಸಿಂಗಾಪುರ ಓಪನ್ನಲ್ಲಿ ಸೆಮಿ ಫೈನಲ್ಗೆ ತಲುಪಿದ್ದರು.
ಮಹಿಳೆಯರ ಡಬಲ್ಸ್ ಪಂದ್ಯದಲ್ಲಿ ಭಾರತೀಯ ಜೋಡಿ ಋತುಪರ್ಣ ಪಾಂಡ ಹಾಗೂ ಶ್ವೇತಪರ್ಣ ಪಾಂಡ 31 ನಿಮಿಷಗಳಲ್ಲಿ ಹಾಂಕಾಂಗ್ನ ಗಾ ಟಿಂಗ್ ಯೆಯುಂಗ್ ಹಾಗೂ ಲ್ಯಾಮ್ ಯೆಯುಂಗ್ ಎದುರು 12-21,13-21 ಗೇಮ್ಗಳ ಅಂತರದಿಂದ ಸೋತಿದ್ದಾರೆ.







