ವರ್ಷದ ನಂತರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಕಲರವ

ಚಿನ್ನಸ್ವಾಮಿ ಸ್ಟೇಡಿಯಂ | Photo Credit ; PTI
ಬೆಂಗಳೂರು: ಸುಮಾರು ಒಂದು ವರ್ಷದ ನಂತರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂಗೆ ಕ್ರಿಕೆಟ್ ಕಲರವ ಕೇಳಿಸಲಿದೆ. ಆದರೆ, ಇದು ಮತ್ತೊಂದು ಐಪಿಎಲ್ನ ತಾಣವಲ್ಲ. ಕಾಲ್ತುಳಿತದ ದುರಂತದ ನಂತರ ಮೂಲಸೌಕರ್ಯಗಳ ಕೂಲಂಕುಶ ಪರೀಕ್ಷೆ ಹಾಗೂ ಜನಸಂದಣಿ ನಿರ್ವಹಣೆಯ ಸಂಪೂರ್ಣ ಪುನರ್ವಿಮರ್ಶೆಯ ಬಳಿಕ ಕ್ರೀಡಾಂಗಣವನ್ನು ಪ್ರೇಕ್ಷಕರಿಗೆ ಮುಕ್ತಗೊಳಿಸಳಾಗಿದೆ.
ಎಂ. ಚಿನ್ನಸ್ವಾಮಿ ಸ್ಟೇಡಿಯಂ ಅನ್ನು ಏಕೆ ಮುಚ್ಚಲಾಯಿತು?:
2025ರ ಮೇ 17ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವೆ ಕೊನೆಯ ಬಾರಿ ಈ ಮೈದಾನದಲ್ಲಿ ಸ್ಪರ್ಧಾತ್ಮಕ ಪಂದ್ಯ ಆಯೋಜಸಲಾಗಿತ್ತು. ಮೂರು ವಾರದೊಳಗೆ ಜೂನ್ 4ರಂದು ಸ್ಟೇಡಿಯಂನ ಹೊರಗಡೆ ಆರ್ಸಿಬಿ ತಂಡದ ಪ್ರಶಸ್ತಿ ಗೆಲುವಿನ ಸಂಭ್ರಮಾಚರಣೆಯ ವೇಳೆ ಕಾಲ್ತುಳಿತ ಸಂಭವಿಸಿತ್ತು. ಈ ಘಟನೆಯ ನಂತರ ಅಧಿಕಾರಿಗಳು ಕ್ರಿಕೆಟ್ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದರು. ಸ್ಟೇಡಿಯಂನಲ್ಲಿ ಸುರಕ್ಷಾ ಶಿಷ್ಟಾಚಾರಗಳನ್ನು ಪರಿಶೀಲಿಸಿದರು. ರಾಜ್ಯ ಸರಕಾರದಿಂದ ನೇಮಿಸಲ್ಪಟ್ಟ ತಜ್ಞರ ಸಮಿತಿಯು 2026ರ ಐಪಿಎಲ್ ಪಂದ್ಯಗಳ ಆತಿಥ್ಯಕ್ಕೆ ಕೊನೆಗೂ ಅನುಮತಿ ನೀಡಿದೆ.
►ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ಎಷ್ಟು ಪಂದ್ಯಗಳನ್ನಾಡಲಿದೆ?
ಆರ್ಸಿಬಿ ತನ್ನ ತವರು ಮೈದಾನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ವರ್ಷ ಕೇವಲ ಐದು ಪಂದ್ಯಗಳನ್ನಾಡಲಿದೆ. ಇನ್ನೆರಡು ತವರು ಪಂದ್ಯಗಳನ್ನು ರಾಯ್ಪುರದಲ್ಲಿ ಆಡಲಿದೆ. ಮಾ.28ರಂದು ಮೊದಲ ಪಂದ್ಯಬೆಂಗಳೂರಿನಲ್ಲಿ ನಡೆಯಲಿದೆ.
►ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೂತನ ಐಪಿಎಲ್ ಟಿಕೆಟ್ ವ್ಯವಸ್ಥೆ
ಸಂಪೂರ್ಣ ಡಿಜಿಟಲ್ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಕೇವಲ ಕ್ಯೂಆರ್ ಕೋಡ್ ಆಧಾರಿತ ಇ-ಟಿಕೆಟ್ಗಳನ್ನು ಸ್ವೀಕರಿಸಲಾಗುತ್ತದೆ. ಟಿಕೆಟ್ಗಳನ್ನು ಯಾರಿಗೂ ಮಾರುವಂತಿಲ್ಲ. ಪಂದ್ಯ ಆರಂಭವಾಗಲು ಮೂರು ಗಂಟೆ ಬಾಕಿ ಇರುವಾಗ ಕ್ಯೂ ಆರ್ ಕೋಡ್ಗಳನ್ನು ಸಿದ್ಧಪಡಿಸಲಾಗುತ್ತದೆ.
►ಕ್ವೀನ್ಸ್ ರಸ್ತೆಯ ಮೂಲಕ ಮಾತ್ರ ಪ್ರವೇಶ
ಏಳು ದ್ವಾರಗಳು ಹಾಗೂ 28 ಪ್ರವೇಶ ದ್ವಾರಗಳು ಕಾರ್ಯನಿರ್ವಹಿಸುತ್ತವೆ. ಸುಗಮ ಸಂಚಾರಕ್ಕಾಗಿ ಗೇಟ್ಗಳನ್ನು ಆರು ಮೀಟರ್ಗೆ ವಿಸ್ತರಿಸಲಾಗಿದೆ.
►ಕ್ರೀಡಾಂಗಣದಲ್ಲಿ ಭದ್ರತಾ ವ್ಯವಸ್ಥೆ
ಕಳೆದ ವರ್ಷದ ಘಟನೆಯ ನಂತರ ಭದ್ರತೆಯನ್ನು ಗಮನಾರ್ಹವಾಗಿ ಹೆಚ್ಚಿಸಲಾಗಿದೆ. ಕಣ್ಗಾವಲು ಹಾಗೂ ಪೊಲೀಸ್ ವ್ಯವಸ್ಥೆ, 500ಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜನಸಂದಣಿಯ ಸಾಂದ್ರತೆಯನ್ನು ಪತ್ತೆ ಹಚ್ಚಲು ಎಐ-ಸಕ್ರಿಯಗೊಳಿಸಿದ ಮೇಲ್ವಿಚಾರಣಾ ವ್ಯವಸ್ಥೆಗಳಿರುತ್ತದೆ.
►ತುರ್ತು ಸಿದ್ಧತೆ
ಒಂಭತ್ತು ಆ್ಯಂಬುಲೆನ್ಸ್ಗಳು ಸಿದ್ಧವಾಗಿರುತ್ತದೆ. ಕ್ರೀಡಾಂಗಣದ ಒಳಗೆ ನಾಲ್ಕು ಸಂಪೂರ್ಣ ಸುಸಜ್ಜಿತ ವೈದ್ಯಕೀಯ ಕೇಂದ್ರಗಳು ಇರಲಿವೆ.






