ಸಿನ್ಸಿನಾಟಿ ಫೈನಲ್: ಕಾರ್ಲೋಸ್- ಸಿನ್ನರ್ ಮುಖಾಮುಖಿ

ಜನ್ನಿಕ್ ಸಿನ್ನರ್ ಮತ್ತು ಸ್ಪೇನ್ನ ಕಾರ್ಲೋಸ್ ಅಲ್ಕರಾಝ್ | PC : atptour.com
ಸಿನ್ಸಿನಾಟಿ, ಆ. 17: ಎಟಿಪಿ-ಡಬ್ಲ್ಯುಟಿಎ ಸಿನ್ಸಿನಾಟಿ ಓಪನ್ ಟೆನಿಸ್ ಪಂದ್ಯಾವಳಿಯ ಫೈನಲ್ನಲ್ಲಿ ವಿಶ್ವದ ನಂಬರ್ ವನ್ ಇಟಲಿಯ ಜನ್ನಿಕ್ ಸಿನ್ನರ್ ಮತ್ತು ಸ್ಪೇನ್ ನ ಕಾರ್ಲೋಸ್ ಅಲ್ಕರಾಝ್ ಮುಖಾಮುಖಿಯಾಗಲಿದ್ದಾರೆ. ಹಾಲಿ ಟೆನಿಸ್ ಋತುವಿನಲ್ಲಿ, ಪ್ರಮುಖ ಪಂದ್ಯಾವಳಿಯೊಂದರ ಫೈನಲ್ನಲ್ಲಿ ಈ ಇಬ್ಬರು ಆಟಗಾರರು ಸೆಣಸುತ್ತಿರುವುದು ಇದು ನಾಲ್ಕನೇ ಬಾರಿಯಾಗಿದೆ.
ಶನಿವಾರ ನಡೆದ ಸೆಮಿಫೈನಲ್ ಗಳಲ್ಲಿ, ಹಾಲಿ ಚಾಂಪಿಯನ್ ಸಿನ್ನರ್ 136ನೇ ರ್ಯಾಂಕ್ ನ ಫ್ರಾನ್ಸ್ ನ ಟೆರೆನ್ಸ್ ಅಟ್ಮೇನ್ರನ್ನು 7-6(7/4) ಸೆಟ್ಗಳಲ್ಲಿ ಸೋಲಿಸಿದರೆ, ಎರಡನೇ ಶ್ರೇಯಾಂಕದ ಕಾರ್ಲೋಸ್ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್ರನ್ನು 6-4, 6-3 ಸೆಟ್ಗಳಿಂದ ಮಣಿಸಿದರು. ಅಲೆಕ್ಸಾಂಡರ್ 32 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಮತ್ತು ತೇವಾಂಶಕ್ಕೆ ಹೊಂದಿಕೊಳ್ಳಲಾಗದೆ ಅಸ್ವಸ್ಥರಾಗಿದ್ದರು.
ಈ ಋತುವಿನಲ್ಲಿ, ಅಲ್ಕರಾಝ್ ಮತ್ತು ಸಿನ್ನರ್ ರೋಮ್, ರೋಲ್ಯಾಂಡ್ ಗ್ಯಾರೋಸ್ ಮತ್ತು ವಿಂಬಲ್ಡನ್ ನಲ್ಲಿ ಫೈನಲ್ನಲ್ಲಿ ಪರಸ್ಪರರನ್ನು ಎದುರಿಸಿದ್ದಾರೆ. ಈ ಪೈಕಿ ರೋಮ್ ಮತ್ತು ರೋಲ್ಯಾಂಡ್ ಗ್ಯಾರೋಸ್ ನಲ್ಲಿ ಅಲ್ಕರಾಜ್ ಪ್ರಶಸ್ತಿ ಗೆದ್ದರೆ, ಇತ್ತೀಚಿನ ವಿಂಬಲ್ಡನ್ ನಲ್ಲಿ ಸಿನ್ನರ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಶನಿವಾರ ನಡೆದ ಒಂದನೇ ಸೆಮಿಫೈನಲ್ನಲ್ಲಿ ತನ್ನ 24ನೇ ಹುಟ್ಟುಹಬ್ಬ ಆಚರಿಸುತ್ತಿದ್ದ ಸಿನ್ನರ್ ಎದುರಾಳಿ ಅಟ್ಮೇನ್ರ ಕನಸಿನ ಓಟವನ್ನು ಕೊನೆಗೊಳಿಸಿದರು. ಈಗ ಅವರು, 2014-15ರ ಬಳಿಕ ಸಿನ್ಸಿನಾಟಿಯಲ್ಲಿ ಬೆನ್ನು ಬೆನ್ನಿಗೆ ಪ್ರಶಸ್ತಿಗಳನ್ನು ಗೆದ್ದ ಮೊದಲ ಆಟಗಾರನಾಗುವ ನಿಟ್ಟಿನಲ್ಲಿ ಮುಂದುವರಿದಿದ್ದಾರೆ. 2014-15ರಲ್ಲಿ ರೋಜರ್ ಫೆಡರರ್ ಈ ಸಾಧನೆ ಮಾಡಿದ್ದರು.
ಅಲ್ಕರಾಝ್ ಕೂಡ ಸಿನ್ಸಿನಾಟಿಯಲ್ಲಿ ತನ್ನ ಎರಡನೇ ಫೈನಲ್ ಆಡುತ್ತಿದ್ದಾರೆ. ಇದಕ್ಕೂ ಮೊದಲು, ಅವರು 2023ರ ಫೈನಲ್ನಲ್ಲಿ ನೊವಾಕ್ ಜೊಕೊವಿಕ್ ವಿರುದ್ಧ ಆಡಿ ಸೋತಿದ್ದರು.
ಪಂದ್ಯ ಆರಂಭಕ್ಕೆ ಮುನ್ನ, ಹುಟ್ಟುಹಬ್ಬದ ಸಡಗರದಲ್ಲಿದ್ದ ಸಿನ್ನರ್ಗೆ ಅವರ ಎದುರಾಳಿ ಅಟ್ಮೇನ್ ಪೋಕೆಮಾನ್ ಕಾರ್ಡೊಂದನ್ನು ಉಡುಗೊರೆಯಾಗಿ ನೀಡಿದರು.







