ಸಿನ್ಸಿನಾಟಿ ಮಾಸ್ಟರ್ಸ್ | ಸಬಲೆಂಕಾ, ಝ್ವೆರೆವ್ ಗೆ ಆಘಾತಕಾರಿ ಸೋಲು

ಅರೈನಾ ಸಬಲೆಂಕಾ | Photo Credit : PTI
ಸಿನ್ಸಿನಾಟಿ, ಆ. 20: ಸಿನ್ಸಿನಾಟಿ ಮಾಸ್ಟರ್ಸ್ ಟೆನಿಸ್ ಪಂದ್ಯಾವಳಿಯಲ್ಲಿ ಬುಧವಾರದ ಮಳೆ ಬಾಧಿತ ನಾಲ್ಕನೇ ಸುತ್ತಿನ ಪಂದ್ಯಗಳಲ್ಲಿ ಅಗ್ರ ಶ್ರೇಯಾಂಕದ ಆಟಗಾರರಾದ ಅರೈನಾ ಸಬಲೆಂಕಾ ಮತ್ತು ಅಲೆಕ್ಸಾಂಡರ್ ಝ್ವೆರೆವ್ ಸೋತು ಹೊರಬಿದ್ದಿದ್ದಾರೆ.
ಪುರುಷರ ಸಿಂಗಲ್ಸ್ನಲ್ಲಿ ಜರ್ಮನಿಯ ಝ್ವೆರೆವ್ ಅಮೆರಿಕದ ಟಾಮಿ ಪಾಲ್ ವಿರುದ್ಧ 4-6, 7-6 (8/6), 6-4 ಸೆಟ್ಗಳಿಂದ ಅನಿರೀಕ್ಷಿತ ಸೋಲನುಭವಿಸಿದರು.
ಆದರೆ, ಮಹಿಳೆಯರ ವಿಭಾಗದಲ್ಲಿ ಅತಿ ದೊಡ್ಡ ಆಘಾತ ಎದುರಾಯಿತು. 35ನೇ ವಿಶ್ವ ರ್ಯಾಂಕಿಂಗ್ನ ಝೆಕ್ ಗಣರಾಜ್ಯದ ಸಾರಾ ಬೆಯ್ಲೆಕ್, ವಿಶ್ವದ ನಂಬರ್ ಒನ್ ಆಟಗಾರ್ತಿ ಸಬಲೆಂಕಾ ಅವರನ್ನು 7-6 (9/7), 6-4 ನೇರ ಸೆಟ್ಗಳಿಂದ ಮಣಿಸಿದರು. ಮಧ್ಯರಾತ್ರಿ ಕಳೆದು ಗುರುವಾರ ಮುಂಜಾನೆಯವರೆಗೂ ಮುಂದುವರಿದ ಈ ಜಿದ್ದಾಜಿದ್ದಿನ ಪಂದ್ಯದಲ್ಲಿ ಬೆಯ್ಲೆಕ್ ಅಂತಿಮ ನಗುವನ್ನು ಬೀರಿದರು.
ಮಾಜಿ ಚಾಂಪಿಯನ್ ಸಬಲೆಂಕಾ ಆರಂಭಿಕ ಸೆಟ್ ನಲ್ಲಿ ಆರಂಭದಲ್ಲಿ ಮುನ್ನಡೆ ಸಾಧಿಸಿದ್ದರು. ಬಳಿಕ ಸೆಟ್ ಟೈಬ್ರೇಕರ್ಗೆ ಹೋದಾಗ 5-1 ಅಂತರದಿಂದ ಮುನ್ನಡೆಯಲ್ಲಿದ್ದರು. ಆದರೆ ಅದ್ಭುತವಾಗಿ ಪುಟಿದೆದ್ದ ಬೆಯ್ಲೆಕ್ 65 ನಿಮಿಷಗಳಲ್ಲಿ ಮೊದಲ ಸೆಟ್ ಅನ್ನು ತನ್ನದಾಗಿಸಿಕೊಂಡರು.
ಎರಡನೇ ಸೆಟ್ ನಲ್ಲಿ ಬೆಲಾರುಸ್ನ ಸಬಲೆಂಕಾ ಅವರನ್ನು ಮೂರು ಬಾರಿ ಬ್ರೇಕ್ ಮಾಡಿದ ಬೆಯ್ಲೆಕ್, 4-1ರ ಹಿನ್ನಡೆಯಿಂದ ಚೇತರಿಸಿಕೊಂಡು ಕೊನೆಯಲ್ಲಿ ಏಸ್ ಸಿಡಿಸುವ ಮೂಲಕ ಗೆಲುವು ದಾಖಲಿಸಿದರು.
‘‘ನನಗೆ ಮಾತನಾಡಲು ಪದಗಳೇ ಸಿಗುತ್ತಿಲ್ಲ. ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ’’ ಎಂದು ಅಗ್ರ 10 ಆಟಗಾರ್ತಿಯೊಬ್ಬರ ವಿರುದ್ಧ ಮೊದಲ ಗೆಲುವು ಸಾಧಿಸಿದ ನಂತರ ಬೆಯ್ಲೆಕ್ ಹೇಳಿದರು.
‘‘ನನ್ನ ಮನಸ್ಸಿಗೆ ಅನಿಸಿದ ರೀತಿಯಲ್ಲಿ ಆಡುತ್ತಿದ್ದೆ. ಹೆಚ್ಚು ಯೋಚಿಸುತ್ತಿರಲಿಲ್ಲ. ಆತಂಕಕ್ಕೆ ಒಳಗಾಗದೆ ಕೇವಲ ಆಟದತ್ತ ಗಮನಹರಿಸಲು ಪ್ರಯತ್ನಿಸಿದೆ. ಏನೇ ಆದರೂ ನನ್ನ ಮೇಲೆ ನಂಬಿಕೆ ಇಟ್ಟಿದ್ದೆ’’ ಎಂದರು.
ಫೆಬ್ರವರಿಯಲ್ಲಿ ಕ್ವಾಲಿಫೈಯರ್ ಆಗಿ ಬಂದು ಅಬುಧಾಬಿ ಹಾರ್ಡ್ ಕೋರ್ಟ್ ಪ್ರಶಸ್ತಿ ಗೆದ್ದಿದ್ದ ಬೆಯ್ಲೆಕ್, ಇನ್ನು ಕ್ವಾರ್ಟರ್ಫೈನಲ್ನಲ್ಲಿ ಅಮೆರಿಕದ ಮ್ಯಾಡಿಸನ್ ಕೀಸ್ ವಿರುದ್ಧ ಸೆಣಸಲಿದ್ದಾರೆ.
►ಝ್ವೆರೆವ್ ಗೆ ಮಳೆ ಅಡ್ಡಿ
ಝ್ವೆರೆವ್ ಅವರ ಪಂದ್ಯವು ಎರಡನೇ ಸೆಟ್ ನ ಏಳನೇ ಗೇಮ್ ನಲ್ಲಿ ಮಳೆಯಿಂದಾಗಿ 90 ನಿಮಿಷಗಳ ಕಾಲ ಸ್ಥಗಿತಗೊಂಡಿತು. ನಂತರವೂ ಮೈದಾನದ ಪಸೆ ಒಣಗಿಸಲು ತಲಾ ಐದು ನಿಮಿಷಗಳ ಎರಡು ಸಣ್ಣ ವಿರಾಮಗಳನ್ನು ತೆಗೆದುಕೊಳ್ಳಲಾಯಿತು.
ಫ್ರೆಂಚ್ ಓಪನ್ ಚಾಂಪಿಯನ್ ಝ್ವೆರೆವ್ ಎರಡನೇ ಸೆಟ್ ನ ಟೈಬ್ರೇಕರ್ ನಲ್ಲಿ 6-5ರಲ್ಲಿ ಪಂದ್ಯವನ್ನು ಗೆಲ್ಲುವ ಅವಕಾಶ ಹೊಂದಿದ್ದರು. ಆದರೆ ಅವರ ಹೊಡೆತ ನೆಟ್ ಗೆ ಬಡಿಯಿತು.
ನಿರ್ಣಾಯಕ ಸೆಟ್ ನಲ್ಲಿ ಜರ್ಮನ್ ಆಟಗಾರ 4-2 ಮುನ್ನಡೆ ಪಡೆದರೂ, ಪಾಲ್ ತಕ್ಷಣವೇ ತಿರುಗೇಟು ನೀಡಿ ಗೆಲುವು ಪಡೆದರು. ಇದು ಝ್ವೆರೆವ್ ವಿರುದ್ಧದ ನಾಲ್ಕು ಮುಖಾಮುಖಿಗಳಲ್ಲಿ ಪಾಲ್ ಅವರ ಮೂರನೇ ಗೆಲುವಾಗಿದೆ.
ಪಾಲ್ ಕ್ವಾರ್ಟರ್ಫೈನಲ್ನಲ್ಲಿ ರೊಲ್ಯಾಂಡ್ ಗ್ಯಾರೋಸ್ ರನ್ನರ್-ಅಪ್ ಫ್ಲೇವಿಯೊ ಕೊಬೊಲ್ಲಿ ಅವರನ್ನು ಎದುರಿಸಲಿದ್ದಾರೆ. ಕೊಬೊಲ್ಲಿ ಇನ್ನೊಂದು ಪ್ರಿಕ್ವಾರ್ಟರ್ಫೈನಲ್ ಪಂದ್ಯದಲ್ಲಿ, ಎರಡೂವರೆ ಗಂಟೆಗಳ ಕಠಿಣ ಹೋರಾಟದ ನಂತರ ಸ್ಪೇನ್ನ ರಫೇಲ್ ಜೊಡಾರ್ ಅವರನ್ನು 4-6, 7-6 (7/3), 6-3 ಸೆಟ್ಗಳಿಂದ ಸೋಲಿಸಿದರು.
►ಫೆಲಿಕ್ಸ್ ಗೆ ಸೋಲು
ಕೆನಡಾದ ಎರಡನೇ ಶ್ರೇಯಾಂಕದ ಫೆಲಿಕ್ಸ್ ಆಗರ್-ಅಲಿಯಾಸಿಮೆ ಕೂಡ ಅಮೆರಿಕದ ಫ್ರಾನ್ಸಿಸ್ ಟಿಯಾಫೊ ವಿರುದ್ಧ 6-3, 6-4 ಅಂತರದಲ್ಲಿ ಸೋತು ಹೊರಬಿದ್ದರು.
ಅಮೆರಿಕದ ಆರನೇ ಶ್ರೇಯಾಂಕದ ಟೇಲರ್ ಫ್ರಿಟ್ಜ್ ಆಸ್ಟ್ರೇಲಿಯಾದ ಕ್ರಿಸ್ ಒ’ಕಾನ್ನೆಲ್ ಅವರನ್ನು 6-4, 6-3 ಅಂತರದಲ್ಲಿ ಸುಲಭವಾಗಿ ಸೋಲಿಸಿದರು.
ಎರಡನೇ ಸುತ್ತಿನಲ್ಲಿ ನೊವಾಕ್ ಜೊಕೊವಿಕ್ ಅವರಿಗೆ ಆಘಾತ ನೀಡಿದ್ದ ತಿಯಾಗೊ ಟಿರಾಂಟೆ ತನ್ನ ಅಚ್ಚರಿಯ ಓಟವನ್ನು ಮುಂದುವರಿಸಿ, ಜಾಕುಬ್ ಮೆನ್ಸಿಕ್ ವಿರುದ್ಧ 5-7, 6-4, 6-4 ಅಂತರದ ಗೆಲುವು ಸಾಧಿಸಿದರು. ಆ ಮೂಲಕ ಮೊದಲ ಬಾರಿಗೆ ಮಾಸ್ಟರ್ಸ್ ಕ್ವಾರ್ಟರ್ಫೈನಲ್ ಪ್ರವೇಶಿಸಿದರು.
ಆಸ್ಟ್ರೇಲಿಯಾದ ಅಲೆಕ್ಸ್ ಡಿ ಮಿನೌರ್ ಅವರನ್ನು ಫ್ರಾನ್ಸ್ನ ಆರ್ತರ್ ಫಿಲ್ಸ್ 6-3, 6-4 ನೇರ ಸೆಟ್ಗಳಿಂದ ಸೋಲಿಸಿದರು.
► ಕೋಕೊ ಗೌಫ್ ಕ್ವಾರ್ಟರ್ ಫೈನಲ್ ಗೆ
ಮಹಿಳೆಯರ ಸಿಂಗಲ್ಸ್ ನಾಲ್ಕನೇ ಸುತ್ತಿನ ಪಂದ್ಯವೊಂದರಲ್ಲಿ, 2023ರ ಚಾಂಪಿಯನ್ ಕೋಕೊ ಗೌಫ್, ಝೆಕ್ ಗಣರಾಜ್ಯದ ಮೇರಿ ಬೌಜ್ಕೋವಾರನ್ನು 6-3, 6-2 ಸೆಟ್ಗಳಿಂದ ಸೋಲಿಸಿ ಕ್ವಾರ್ಟರ್ಫೈನಲ್ ಪ್ರವೇಶಿಸಿದರು.
ಅವರು ಜಯದ ಹಾದಿಯಲ್ಲಿ ತಾನು ಎದುರಿಸಿದ ಎಲ್ಲಾ ಎಂಟು ಬ್ರೇಕ್ ಪಾಯಿಂಟ್ಗಳನ್ನು ಕಾಪಾಡಿಕೊಂಡರು. ನಾಲ್ಕನೇ ಶ್ರೇಯಾಂಕದ ಗೌಫ್ ಮೊದಲ ಮ್ಯಾಚ್ ಪಾಯಿಂಟ್ ನಲ್ಲಿ ಡಬಲ್-ಫಾಲ್ಟ್ ಮಾಡಿದರೂ, ಎರಡನೇ ಅವಕಾಶದಲ್ಲಿ ಓವರ್ಹೆಡ್ ವಿನ್ನರ್ ಹೊಡೆಯುವ ಮೂಲಕ ಗೆಲುವು ಖಚಿತಪಡಿಸಿಕೊಂಡರು.
ಇನ್ನೊಂದು ಪ್ರಿಕ್ವಾರ್ಟರ್ಫೈನಲ್ ಪಂದ್ಯದಲ್ಲಿ, ಹಾಲಿ ಮಹಿಳಾ ಚಾಂಪಿಯನ್ ಇಗಾ ಸ್ವಿಯಾಟೆಕ್, ಫ್ರಾನ್ಸ್ನ ಡಯಾನ್ ಪ್ಯಾರಿ ಅವರನ್ನು 6-3, 6-3 ಸೆಟ್ಗಳಿಂದ ಸೋಲಿಸಿದರು.
ಏಳನೇ ಶ್ರೇಯಾಂಕದ ಪೋಲ್ಯಾಂಡ್ ಆಟಗಾರ್ತಿ ಸ್ವಿಯಾಟೆಕ್ ಕ್ವಾರ್ಟರ್ಫೈನಲ್ನಲ್ಲಿ ಎಲೆನಾ ರೈಬಾಕಿನಾರನ್ನು ಎದುರಿಸಲಿದ್ದಾರೆ.
ಇನ್ನೊಂದು ಪಂದ್ಯದಲ್ಲಿ, ರೈಬಾಕಿನಾ ಅವರು ಡಯಾನಾ ಶ್ನೈಡರ್ ಅವರನ್ನು 6-4, 6-4 ಅಂತರದಲ್ಲಿ ಮಣಿಸಿದರು.
► ಮಿರಾ ಆಂಡ್ರೀವಾ, ಲಿಂಡಾ ನೊಸ್ಕೋವಾ ನಿರ್ಗಮನ
ಅದೇ ವೇಳೆ, ಇತರ ಇಬ್ಬರು ಹಾಲಿ ಗ್ರ್ಯಾನ್ಸ್ಲಾಮ್ ಚಾಂಪಿಯನ್ಗಳು ಪಂದ್ಯಾವಳಿಯಿಂದ ನಿರ್ಗಮಿಸಿದರು. ಉಕ್ರೇನ್ನ ಮಾರ್ತಾ ಕೊಸ್ಟ್ಯುಕ್ ಮೊದಲ ಸೆಟ್ ಹಿನ್ನಡೆಯ ನಂತರ ಫ್ರೆಂಚ್ ಓಪನ್ ವಿಜೇತೆ ಮಿರಾ ಆಂಡ್ರೀವಾ ಅವರನ್ನು 4-6, 6-0, 6-2 ಅಂತರದಿಂದ ಸೋಲಿಸಿದರು.
ಇನ್ನೊಂದು ಪಂದ್ಯದಲ್ಲಿ, ವಿಂಬಲ್ಡನ್ ಚಾಂಪಿಯನ್ ಲಿಂಡಾ ನೊಸ್ಕೋವಾ ಮಳೆಬಾಧಿತ ಪಂದ್ಯದಲ್ಲಿ ಅಮಂಡಾ ಅನಿಸಿಮೊವಾ ವಿರುದ್ಧ 6-1, 6-4 ಸೆಟ್ಗಳಿಂದ ಪರಾಭವಗೊಂಡರು.






