ಸಿನ್ಸಿನಾಟಿ ಓಪನ್ ಟೆನಿಸ್ ಟೂರ್ನಿ | ಫೈನಲ್ ನಲ್ಲಿ ಸಿನ್ನರ್-ಅಲ್ಕರಾಝ್ ಹಣಾಹಣಿ

ಜನ್ನಿಕ್ ಸಿನ್ನರ್, ಕಾರ್ಲೊಸ್ ಅಲ್ಕರಾಝ್ | PC : X
ಸಿನ್ಸಿನಾಟಿ, ಆ.18: ಅಗ್ರ ಶ್ರೇಯಾಕದ ಜನ್ನಿಕ್ ಸಿನ್ನರ್ ಹಾಗೂ ಸ್ಪೇನ್ ಆಟಗಾರ ಕಾರ್ಲೊಸ್ ಅಲ್ಕರಾಝ್ ಸಿನ್ಸಿನಾಟಿ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ.
ಮೂರು ತಿಂಗಳಲ್ಲಿ ಟೆನಿಸ್ ಅಭಿಮಾನಿಗಳು ಅಲ್ಕರಾಝ್ ಹಾಗೂ ಸಿನ್ನರ್ ನಡುವಿನ ಮತ್ತೊಂದು ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದ್ದಾರೆ. ಈ ಇಬ್ಬರು ಪ್ರಸಕ್ತ ಋತುವಿನಲ್ಲಿ ರೋಮ್, ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್ ಚಾಂಪಿಯನ್ಶಿಪ್ ನಲ್ಲಿ ಹೋರಾಡಿದ್ದಾರೆ.
ಶನಿವಾರ ತನ್ನ 24ನೇ ಹುಟ್ಟುಹಬ್ಬ ಆಚರಿಸಿದ ಹಾಲಿ ಚಾಂಪಿಯನ್ ಸಿನ್ನರ್ ಸೆಮಿ ಫೈನಲ್ ಪಂದ್ಯದಲಿ ಫ್ರೆಂಚ್ ಕ್ವಾಲಿಫೈಯರ್ ಟೆರೆನ್ಸ್ ಅಟ್ಮನ್ ರನ್ನು 7-6(4), 6-2 ಸೆಟ್ ಗಳ ಅಂತರದಿಂದ ಮಣಿಸಿದರು. ಈ ಮೂಲಕ ಅಟ್ಮನ್ ಅವರ ಕನಸಿನ ಓಟಕ್ಕೆ ಬ್ರೇಕ್ ಹಾಕಿದರು.
ಇಟಲಿ ಆಟಗಾರ ಸಿನ್ನರ್ ಫೈನಲ್ ಪಂದ್ಯದಲ್ಲಿ ಅಲ್ಕರಾಝ್ ಅವರ ಸವಾಲನ್ನು ಎದುರಿಸಲಿದ್ದಾರೆ. ಈ ವರ್ಷ ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್ ಚಾಂಪಿಯನ್ ಶಿಪ್ ಫೈನಲ್ ನಲ್ಲೂ ಸಿನ್ನರ್ ಹಾಗೂ ಅಲ್ಕರಾಝ್ ಪ್ರಶಸ್ತಿಗಾಗಿ ಸೆಣಸಾಡಿದ್ದರು. ಸಿನ್ನರ್ ಸದ್ಯ ಯು.ಎಸ್. ಓಪನ್, ಆಸ್ಟ್ರೇಲಿಯನ್ ಓಪನ್ ಹಾಗೂ ವಿಂಬಲ್ಡನ್ ಚಾಂಪಿಯನ್ ಶಿಪ್ ನಲ್ಲಿ ಹಾಲಿ ಚಾಂಪಿಯನ್ ಆಗಿದ್ದಾರೆ.
ಸಿನ್ನರ್ ಅವರು ಒಂದೂ ಸೆಟ್ಟನ್ನು ಸೋಲದೆ ಎಟಿಪಿ ಮಾಸ್ಟರ್ಸ್-1000 ಟೂರ್ನಿಯಲ್ಲಿ 8ನೇ ಬಾರಿ ಫೈನಲ್ ಗೆ ತಲುಪಿದ್ದಾರೆ. ಅಟ್ಮನ್ ರನ್ನು ಮಣಿಸಿ ಹುಲ್ಲುಹಾಸಿನ ಅಂಗಣದಲ್ಲಿ ತನ್ನ ಗೆಲುವಿನ ಓಟವನ್ನು 26 ಪಂದ್ಯಗಳಿಗೆ ವಿಸ್ತರಿಸಿದ್ದಾರೆ.
ವಿಶ್ವದ ನಂ.2ನೇ ಆಟಗಾರ ಅಲ್ಕರಾಝ್ ಮತ್ತೊಂದು ಪುರುಷರ ಸಿಂಗಲ್ಸ್ ವಿಭಾಗದ ಸೆಮಿ ಫೈನಲ್ ನಲ್ಲಿ ಜರ್ಮನಿ ಆಟಗಾರ ಅಲೆಕ್ಸಾಂಡರ್ ಝ್ವೆರೆವ್ರನ್ನು 6-4, 6-3 ನೇರ ಸೆಟ್ಗಳ ಅಂತರದಿಂದ ಮಣಿಸಿದರು. 3ನೇ ಶ್ರೇಯಾಂಕದ ಝ್ವೆರವ್ ಪಂದ್ಯದಲ್ಲಿ ಗಾಯದ ಸಮಸ್ಯೆ ಎದುರಿಸಿದರು.
ಅಲ್ಕರಾಝ್ ಈ ವರ್ಷ ಫ್ರೆಂಚ್ ಓಪನ್ ಸಹಿತ 5 ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಮೊತ್ತ ಮೊದಲ ಬಾರಿ ಸಿನ್ಸಿನಾಟಿ ಟ್ರೋಫಿ ಗೆಲ್ಲುವತ್ತ ಚಿತ್ತಹರಿಸಿದ್ದಾರೆ.
ಈ ಇಬ್ಬರು ಆಟಗಾರರು ಎಟಿಪಿ ಫೈನಲ್ಸ್ ನಲ್ಲಿ ತಮ್ಮ ಸ್ಥಾನ ಪಡೆದಿದ್ದಾರೆ. ಈ ಪಂದ್ಯವು ವರ್ಷಾಂತ್ಯದಲ್ಲಿ ನಂ.1 ಸ್ಥಾನಕ್ಕೇರಲು ನೆರವಾಗಲಿದೆ. ಅಲ್ಕರಾಝ್ ಮೊದಲ ಬಾರಿ ಸಿನ್ಸಿನಾಟಿ ಪ್ರಶಸ್ತಿ ಜಯಿಸಲು ಸಫಲರಾದರೆ, ಕಳೆದ ವರ್ಷ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳಲಿದ್ದಾರೆ.
ಅಲ್ಕರಾಝ್-ಝ್ವೆರೆವ್ ನಡುವಿನ ಮೊದಲ ಸೆಟ್ ಪಂದ್ಯವು 11 ನಿಮಿಷ ತಡವಾಗಿ ಆರಂಭವಾಯಿತು. ಪಂದ್ಯ ಆರಂಭವಾದ ತಕ್ಷಣ ಸತತ ಮೂರು ಬ್ರೇಕ್ ಪಾಯಿಂಟ್ಸ್ ಉಳಿಸಿದ ಅಲ್ಕರಾಝ್ 2-2ರಿಂದ ಸಮಬಲಗೊಳಿಸಿದರು. ಆ ನಂತರ 4-3ರಿಂದ ಮುನ್ನಡೆ ಪಡೆದರು.
ವಿಶ್ವದ ನಂ1 ಆಟಗಾರ ಸಿನ್ನರ್ ತನ್ನ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿ ವಿಶ್ವದ ನ.136ನೇ ಆಟಗಾರ ಅಟ್ಮನ್ ಅವರೊಂದಿಗೆ ಸೆಣಸಾಡಿದರು.
‘‘ಇದೊಂದು ತುಂಬಾ ಕಠಿಣ ಸವಾಲಾಗಿತ್ತು. ಪ್ರತೀ ಬಾರಿ ಹೊಸ ಆಟಗಾರನ ವಿರುದ್ಧ್ದ ಆಡುವಾಗ ಅದೊಂದು ತುಂಬಾ ಕಠಿಣವಾಗಿರುತ್ತದೆ’’ ಎಂದು ಸಿನ್ನರ್ ಹೇಳಿದರು.
ಯುವ ಆಟಗಾರ ಅಟ್ಮನ್ ಅವರು ಇದೇ ಮೊದಲ ಬಾರಿ ಎಟಿಪಿ ಮಾಸ್ಟರ್ಸ್-1000 ಟೂರ್ನಿಯಲ್ಲಿ ಸೆಮಿ ಫೈನಲ್ ಗೆ ತಲುಪಿದ್ದರು. ಸೆಮಿ ಫೈನಲ್ ಹಾದಿಯಲ್ಲಿ ಟಾಪ್-10 ಆಟಗಾರರಾದ ಟೇಲರ್ ಫ್ರಿಟ್ಝ್ ಹಾಗೂ ಹೋಲ್ಗರ್ ರೂನ್ ಅವರನ್ನು ಮಣಿಸಿ ಶಾಕ್ ನೀಡಿದ್ದರು.







