ಕ್ಲಚ್ ಚೆಸ್: ಚಾಂಪಿಯನ್ಸ್ ಶೋಡೌನ್ | ನಕಮುರ ವಿರುದ್ಧ ಗುಕೇಶ್ ಗೆ ಜಯ

Photo Credit : ddnews.gov.in
ಸೈಂಟ್ ಲೂಯಿಸ್ (ಅಮೆರಿಕ), ಅ. 29: ಅಮೆರಿಕದ ಸೈಂಟ್ ಲೂಯಿಸ್ ಚೆಸ್ ಕ್ಲಬ್ ನಲ್ಲಿ ನಡೆಯುತ್ತಿರುವ ‘ಕ್ಲಚ್ ಚೆಸ್: ಚಾಂಪಿಯನ್ಸ್ ಶೋಡೌನ್’ ಪಂದ್ಯಾವಳಿಯಲ್ಲಿ, ‘ಚೆಕ್ಮೇಟ್: ಅಮೆರಿಕ ಮತ್ತು ಭಾರತ ಪ್ರದರ್ಶನ ಪಂದ್ಯ’ದಲ್ಲಿ, ವಿಶ್ವ ಚಾಂಪಿಯನ್, ಭಾರತದ ಗುಕೇಶ್ ದೊಮ್ಮರಾಜು ಅಮೆರಿಕದ ಗ್ರಾಂಡ್ ಮಾಸ್ಟರ್ ಹಿಕರು ನಕಮುರ ಅವರನ್ನು ಸೋಲಿಸಿದ್ದಾರೆ.
ಆದರೆ, ಈ ವಿಜಯದ ಹೊರತಾಗಿಯೂ, ಭಾರತೀಯ ಗ್ರಾಂಡ್ ಮಾಸ್ಟರ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಜಾರಿದ್ದಾರೆ.
ಮಂಗಳವಾರ ಶೋಡೌನ್ ನಲ್ಲಿ ಗುಕೇಶ್ ಹೆಚ್ಚಿನ ಯಶಸ್ಸನ್ನು ಕಾಣಲಿಲ್ಲ. ನಾಲ್ಕನೇ ಸುತ್ತಿನಲ್ಲಿ, ಅವರು ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧದ ಎರಡೂ ಪಂದ್ಯಗಳಲ್ಲಿ ಸೋಲನುಭವಿಸಿದರು. ಬಳಿಕ, ಐದನೇ ಸುತ್ತಿನಲ್ಲಿ, ಅವರಿಗೆ ಹಿಕರು ನಕಮುರ ವಿರುದ್ಧ ಡ್ರಾ ಸಾಧಿಸಲಷ್ಟೇ ಸಾಧ್ಯವಾಯಿತು.
ಫೆಬಿಯಾನಿ ಕರುವಾನ ವಿರುದ್ಧದ ಪಂದ್ಯದಲ್ಲೂ ಗುಕೇಶ್ ಸೋಲನುಭವಿಸಿದರು. ಅದು ಅವರ ದಿನದ ಮೂರನೇ ಸೋಲಾಯಿತು. ಎರಡನೇ ಸುತ್ತಿನಲ್ಲಿ ಅವರಿಗೆ ಡ್ರಾ ಸಾಧಿಸಲು ಸಾಧ್ಯವಾಗಿತ್ತು.
ಗುಕೇಶ್ ಈಗ 7 ಅಂಕಗಳೊಂದಿಗೆ ನಕಮುರ ಜೊತೆಗೆ ಜಂಟಿ ಕೊನೆಯ ಸ್ಥಾನದಲ್ಲಿದ್ದಾರೆ. 11.5 ಅಂಕಗಳನ್ನು ಗಳಿಸಿರುವ ಕಾರ್ಲ್ಸನ್ ಅಗ್ರ ಸ್ಥಾನವನ್ನು ಪಡೆದಿದ್ದಾರೆ. 10.5 ಅಂಕಗಳನ್ನು ಹೊಂದಿರುವ ಕರುವಾನ ಎರಡನೇ ಸ್ಥಾನದಲ್ಲಿದ್ದಾರೆ.





