ಆಸ್ಟ್ರೇಲಿಯದ ಮಾಜಿ ನಾಯಕ, ಕೋಚ್ ಬಾಬ್ ಸಿಂಪ್ಸನ್ ನಿಧನ

ಕೋಚ್ ಬಾಬ್ ಸಿಂಪ್ಸನ್ | PC : NDTV
ಮೆಲ್ಬರ್ನ್, ಆ.16: ಆಸ್ಟ್ರೇಲಿಯ ಕ್ರಿಕೆಟ್ ತಂಡದ ಮಾಜಿ ಟೆಸ್ಟ್ ನಾಯಕ ಹಾಗೂ ಮೊದಲ ಪೂರ್ಣಕಾಲಿಕ ಕೋಚ್ ಬಾಬ್ ಸಿಂಪ್ಸನ್ ಅವರು ಸಿಡ್ನಿಯಲ್ಲಿ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.
ಆಸ್ಟ್ರೇಲಿಯ ಕ್ರಿಕೆಟ್ ಇತಿಹಾಸದಲ್ಲಿ ಸಿಂಪ್ಸನ್ ಅತ್ಯಂತ ಪ್ರಭಾವಿ ವ್ಯಕ್ತಿಗಳ ಪೈಕಿ ಒಬ್ಬರಾಗಿದ್ದರು. 40 ವರ್ಷಗಳಿಗೂ ಅಧಿಕ ಸಮಯ ಕ್ರಿಕೆಟಿಗನಾಗಿ, ನಾಯಕ, ಕೋಚ್ ಹಾಗೂ ವೀಕ್ಷಕ ವಿವರಣೆಗಾರನಾಗಿ ತನ್ನ ಹೆಜ್ಜೆ ಗುರುತು ಮೂಡಿಸಿದ್ದರು. 1957 ಹಾಗೂ 1978ರ ನಡುವೆ 62 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. 46.81ರ ಸರಾಸರಿಯಲ್ಲಿ 4,869 ರನ್ ಗಳಿಸಿದ್ದ ಸಿಂಪ್ಸನ್ ಅವರು ಒಟ್ಟು 71 ವಿಕೆಟ್ ಗಳನ್ನು ಉರುಳಿಸಿದ್ದರು. ಸ್ಲಿಪ್ ನಲ್ಲಿ ಓರ್ವ ಶ್ರೇಷ್ಠ ಫೀಲ್ಡರ್ ಆಗಿದ್ದರು.
ಸಿಂಪ್ಸನ್ ತನ್ನ 16ನೇ ವಯಸ್ಸಿನಲ್ಲಿ ನ್ಯೂ ಸೌತ್ ವೇಲ್ಸ್ ತಂಡದ ಪರ ತನ್ನ ಚೊಚ್ಚಲ ಪ್ರಥಮ ದರ್ಜೆ ಪಂದ್ಯ ಆಡಿದ್ದರು. 21,029 ರನ್ ಗಳಿಸಿದ್ದಲ್ಲದೆ, ತನ್ನ ಲೆಗ್ ಸ್ಪಿನ್ ಬೌಲಿಂಗ್ ಮೂಲಕ ಒಟ್ಟು 349 ವಿಕೆಟ್ ಗಳನ್ನು ಉರುಳಿಸಿದ್ದರು.
11 ವರ್ಷಗಳ ಕಾಲ 50 ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯದ ಶ್ರೇಷ್ಠ ಆರಂಭಿಕ ಆಟಗಾರನಾಗಿ, 29 ಪಂದ್ಯಗಳಲ್ಲಿ ನಾಯಕನಾಗಿ ಆಡಿದ್ದ ಸಿಂಪ್ಸನ್ 1968ರಲ್ಲಿ ಮೊದಲಿಗೆ ನಿವೃತ್ತಿ ಪಡೆದರು. 1977ರಲ್ಲಿ ನಿವೃತ್ತಿಯ ನಿರ್ಧಾರದಿಂದ ಹಿಂದೆ ಸರಿದು ಟೆಸ್ಟ್ ನಾಯಕನಾಗಿ ಮರಳಿದ್ದರು. ಸಿಂಪ್ಸನ್ ತನ್ನ 41ನೇ ವಯಸ್ಸಿನಲ್ಲಿ ಸ್ವದೇಶದಲ್ಲಿ ಭಾರತದ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ವಿದೇಶಿ ನೆಲದಲ್ಲಿ 5 ಪಂದ್ಯಗಳ ಟೆಸ್ಟ್ ಸರಣಿಯ ನಾಯಕತ್ವವಹಿಸಿದ್ದರು.
ಸಿಂಪ್ಸನ್ ಟೆಸ್ಟ್ ಕ್ರಿಕೆಟ್ ನಲ್ಲಿ ಒಟ್ಟು 10 ಶತಕಗಳನ್ನು ಗಳಿಸಿದ್ದು, ಈ ಎಲ್ಲ ಶತಕಗಳನ್ನು ನಾಯಕನಾಗಿದ್ದಾಗ ಗಳಿಸಿದ್ದು ವಿಶೇಷ. 1964ರಲ್ಲಿ ಮ್ಯಾಂಚೆಸ್ಟರ್ ನಲ್ಲಿ ಇಂಗ್ಲೆಂಡ್ ವಿರುದ್ಧ ತಾನಾಡಿದ 30ನೇ ಟೆಸ್ಟ್ ಪಂದ್ಯದಲ್ಲಿ 311 ರನ್ ಗಳಿಸಿ ಚೊಚ್ಚಲ ಶತಕ ಗಳಿಸಿದರು.
ಸಿಂಪ್ಸನ್ ಅವರು 1965ರಲ್ಲಿ ವರ್ಷದ ವಿಸ್ಡನ್ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದರು. ಐಸಿಸಿ ಹಾಲ್ ಆಫ್ ಫೇಮ್ ಹಾಗೂ ಆಸ್ಟ್ರೇಲಿಯದ ಕ್ರಿಕೆಟ್ ಹಾಲ್ ಆಫ್ ಫೇಮ್ ನ ಸದಸ್ಯರಾಗಿದ್ದರು.







