ರೋಹಿತ್ ಶರ್ಮಾ ನಿವೃತ್ತಿಯ ಯೋಜನೆ ಬಗ್ಗೆ ಕೋಚ್ ದಿನೇಶ್ ಲಾಡ್ ಹೇಳಿದ್ದೇನು?

ರೋಹಿತ್ ಶರ್ಮಾ | Photo Credit : PTI
ಹೊಸದಿಲ್ಲಿ, ಅ.26: ಆಸ್ಟ್ರೇಲಿಯ ವಿರುದ್ಧ ಶನಿವಾರ ಅಂತ್ಯಗೊಂಡ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಒಟ್ಟು 202 ರನ್ ಗಳಿಸಿದ ರೋಹಿತ್ ಶರ್ಮಾ ಟೀಕಾಕಾರರ ಬಾಯಿ ಮುಚ್ಚಿಸಿದ್ದಲ್ಲದೆ, ತನ್ನ ಕ್ರಿಕೆಟ್ ಭವಿಷ್ಯದ ಕುರಿತು ಹೊಸ ಚರ್ಚೆಗೆ ನಾಂದಿ ಹಾಡಿದರು.
ಭಾರತದ ಮಾಜಿ ನಾಯಕ ರೋಹಿತ್ 101 ಸರಾಸರಿಯಲ್ಲಿ, 85ರ ಸ್ಟ್ರೈಕ್ ರೇಟ್ನಲ್ಲಿ ರನ್ ಗಳಿಸಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.ಸಿಡ್ನಿಯಲ್ಲಿ 121 ರನ್ ಗಳಿಸಿ ಭಾರತವು 9 ವಿಕೆಟ್ ಗಳಿಂದ ಗೆಲ್ಲಲು ನೆರವಾಗಿದ್ದರು.
ರೋಹಿತ್ 2027ರ ವಿಶ್ವಕಪ್ ತನಕ ಆಡುವ ಗುರಿ ಇಟ್ಟುಕೊಂಡಿದ್ದಾರೆ ಎಂದು ರೋಹಿತ್ ಬಾಲ್ಯದ ಕೋಚ್ ದಿನೇಶ್ ಲಾಡ್ ಬಹಿರಂಗಪಡಿಸಿದ್ದಾರೆ.
ದೀರ್ಘ ವಿರಾಮದ ನಂತರ ಕ್ರಿಕೆಟಿಗೆ ವಾಪಸಾದ ರೋಹಿತ್ ತಕ್ಷಣವೇ ತನ್ನ ಫಾರ್ಮ್ ಗೆ ಮರಳಿದ್ದಾರೆ. ಸಿಡ್ನಿಯಲ್ಲಿನ ಶತಕವು ಉನ್ನತ ಮಟ್ಟದಲ್ಲಿ ಶ್ರೇಷ್ಠ ಪ್ರದರ್ಶನದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.
ಬಾಲ್ಯದಿಂದಲೂ ರೋಹಿತ್ಗೆ ಸಲಹೆ ನೀಡುತ್ತಿರುವ ಲಾಡ್, ತನ್ನ ವಿದ್ಯಾರ್ಥಿಯ ಇತ್ತೀಚೆಗಿನ ಯಶಸ್ಸಿನಿಂದ ಉತ್ಸಾಹದಲ್ಲಿದ್ದಾರೆ.
‘‘ಇದು ವಿಶೇಷ ಕ್ಷಣ. ಅವರು ಪ್ರದರ್ಶನ ನೀಡುತ್ತಿಲ್ಲ. ಕ್ರಿಕೆಟ್ ಆಡುವುದನ್ನು ನಿಲ್ಲಿಸಬೇಕು ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಅವರು ಕಳೆದ 2 ಪಂದ್ಯಗಳಲ್ಲಿ 2 ಉತ್ತಮ ಇನಿಂಗ್ಸ್ಗಳನ್ನು ಆಡಿದ್ದಾರೆ. ಮೊದಲು 73 ರನ್ ಗಳಿಸಿದರೆ, ಆ ನಂತರ 121 ರನ್ ಗಳಿಸಿದರು. ಈ ಮೂಲಕ ತಾನು ದೇಶಕ್ಕೆ ಇನ್ನೂ ಕೊಡುಗೆ ನೀಡುವ ಪ್ರಮುಖ ಆಟಗಾರ ಎಂದು ತೋರಿಸಿಕೊಟ್ಟಿದ್ದಾರೆ. ರೋಹಿತ್ ಅವರ ದೃಢಸಂಕಲ್ಪಕ್ಕೆ ಅವರಲ್ಲಿರುವ ಆತ್ಮವಿಶ್ವಾಸವೇ ಕಾರಣ. ಅವರು 2027ರ ವಿಶ್ವಕಪ್ ತನಕ ಆಡಲು ಬಯಸುತ್ತಿದ್ದಾರೆ. ಅದರ ನಂತರವೇ ನಿವೃತ್ತಿ ಹೊಂದಲಿದ್ದಾರೆ. ಅವರು ಅದಕ್ಕಾಗಿ ತಯಾರಿ ನಡೆಸುತ್ತಿದ್ದಾರೆ’’ಎಂದು ಲಾಡ್ ಹೇಳಿದರು.







