ಎದುರಾಗಿರುವ ಅವಕಾಶದ ಬಗ್ಗೆ ಗಮನ ಹರಿಸಿ: ಟೀಮ್ ಇಂಡಿಯಾ ಸದಸ್ಯರಿಗೆ ಕೋಚ್ ಗಂಭೀರ್ ಕರೆ

ಗೌತಮ್ ಗಂಭೀರ್| PTI
ಮುಂಬೈ: ಶುಭಮನ್ ಗಿಲ್ ನೇತೃತ್ವದ ಭಾರತೀಯ ಕ್ರಿಕೆಟ್ ತಂಡವು ಇಂಗ್ಲೆಂಡ್ನಲ್ಲಿ ಆ ದೇಶದ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಸಿದ್ಧಗೊಳ್ಳುತ್ತಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವಿಚಂದ್ರನ್ ಅಶ್ವಿನಿ ಈಗಾಗಲೇ ನಿವೃತ್ತರಾಗಿರುವ ಹಿನ್ನೆಲೆಯಲ್ಲಿ, ಭಾರತೀಯ ತಂಡವು ಇಂಗ್ಲೆಂಡ್ನಲ್ಲಿ ಕಠಿಣ ಸ್ಪರ್ಧೆಯನ್ನು ಎದುರು ನೋಡುತ್ತಿದೆ.
ಹಾಗೆ ನೋಡಿದರೆ, ಭಾರತೀಯ ಉಪಖಂಡದ ಕ್ರಿಕೆಟಿಗರಿಗೆ ಇಂಗ್ಲೆಂಡ್ ಪ್ರವಾಸ ಯಾವತ್ತೂ ಹಿತಕರವಾಗಿರಲಿಲ್ಲ. ಆದರೆ, ಈ ಬಾರಿ ಸವಾಲುಗಳು ಇನ್ನೂ ಹೆಚ್ಚಿವೆ.
ಈ ಹಿನ್ನೆಲೆಯಲ್ಲಿ, ತಂಡದಿಂದ ಏನನ್ನು ನಿರೀಕ್ಷಿಸಲಾಗುತ್ತದೆ ಎನ್ನುವುದನ್ನು ತಂಡದ ಕೋಚ್ ಗೌತಮ್ ಗಂಭೀರ್ ಸ್ಪಷ್ಟಪಡಿಸಿದ್ದಾರೆ. ತಂಡದಲ್ಲಿ ಯಾರಿಲ್ಲ ಎನ್ನುವುದರ ಬಗ್ಗೆ ಯೋಚಿಸುವ ಬದಲು, ತಮಗಿರುವ ಅವಕಾಶಗಳೇನು ಎಂಬ ಬಗ್ಗೆ ಗಮನ ಹರಿಸುವಂತೆ ಅವರು ಆಟಗಾರರಿಗೆ ಕರೆ ನೀಡಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಬಿಡುಗಡೆಗೊಳಿಸಿದ ವೀಡಿಯೊವೊಂದರಲ್ಲಿ, ಗಂಭೀರ್ ತನ್ನ ಆಟಗಾರರಿಗೆ ಎರಡು ಆಯ್ಕೆಗಳನ್ನು ನೀಡುತ್ತಾರೆ- ಒಂದೋ ತಂಡವು ತನ್ನ ಮೂವರು ಅತಿ ಅನುಭವಿ ಆಟಗಾರರ ಸೇವೆಯಿಂದ ವಂಚಿತವಾಗಿದೆ ಎಂಬ ಸಂಗತಿಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಿ ಅಥವಾ ಏನಾದರೂ ವಿಶೇಷವಾದುದನ್ನು ಮಾಡುವ ಅವಕಾಶ ಸಿಕ್ಕಿದೆ ಎಂಬುದಾಗಿ ಭಾವಿಸಿಕೊಳ್ಳಿ.
‘‘ಈ ವಿಷಯವನ್ನು ಎರಡು ವಿಧವಾಗಿ ನೋಡಬಹುದು. ಒಂದು, ನಮ್ಮ ಮೂವರು ಅತ್ಯಂತ ಅನುಭವಿ ಆಟಗಾರರ ಸೇವೆಯಿಂದ ತಂಡ ವಂಚಿತವಾಗಿದೆ, ಎರಡನೆಯದು, ದೇಶಕ್ಕಾಗಿ ವಿಶೇಷವಾದ ಏನನ್ನಾದರೂ ಮಾಡುವ ಅಪೂರ್ವ ಅವಕಾಶವೊಂದು ನಮಗೆ ಎದುರಾಗಿದೆ. ನಾನು ಈ ತಂಡವನ್ನು ನೋಡುವಾಗ, ಅಲ್ಲಿ ವಿಶೇಷವಾದ ಏನನ್ನಾದರೂ ಮಾಡುವ ಹಸಿವು, ಗೀಳು ಮತ್ತು ಬದ್ಧತೆ ಇದೆ ಎಂದು ನನಗನಿಸುತ್ತದೆ. ನಾವು ತ್ಯಾಗ ಮಾಡಿದರೆ, ನಮ್ಮ ನೆಮ್ಮದಿಯ ವಲಯದಿಂದ ಹೊರಬಂದರೆ, ನಾವು ಹೋರಾಟವನ್ನು ಆರಂಭಿಸಿದರೆ, ಪ್ರತಿದಿನವಲ್ಲ, ಪ್ರತಿ ಅವಧಿ, ಪ್ರತಿ ಗಂಟೆ, ಪ್ರತಿ ಚೆಂಡಿನಲ್ಲೂ ಹೋರಾಡಿದರೆ ಈ ಪ್ರವಾಸವನ್ನು ಸ್ಮರಣೀಯವಾಗಿಸಬಹುದು ಎಂದು ನನಗನಿಸುತ್ತದೆ. ನಾವು ಇದನ್ನು ಇಂದಿನಿಂದಲೇ ಆರಂಭಿಸೋಣ. ನಾವು ದೇಶಕ್ಕಾಗಿ ಆಡುವುದನ್ನು ಆನಂದಿಸಲು ಆರಂಭಿಸೋಣ, ಯಾಕೆಂದರೆ ಅದಕ್ಕಿಂತ ದೊಡ್ಡ ಗೌರವ ಬೇರೊಂದಿಲ್ಲ’’ ಎಂಬುದಾಗಿ ಗಂಭೀರ್ ಹೇಳಿದ್ದಾರೆ.







