ಶ್ರೀಲಂಕಾ ಸರಣಿಗೂ ಮೊದಲು ಟೀಂ ಇಂಡಿಯಾಕ್ಕೆ ಕೋಚ್ ಗಂಭೀರ್ ಕಿವಿಮಾತು

ಗೌತಮ್ ಗಂಭೀರ್ | Photo Credit : PTI
ಕೊಲಂಬೊ, ಆ.6: ಮುಂದಿನ ವಾರ ಆರಂಭವಾಗಲಿರುವ ಶ್ರೀಲಂಕಾ ತಂಡದ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ದಿನವೇ ತಮ್ಮ ತಂಡ ಸಿದ್ಧವಾಗಲಿದೆ ಎಂದು ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಹೇಳಿದ್ದಾರೆ.
ಮೊದಲ ಟೆಸ್ಟ್ ಪಂದ್ಯವು ಗಾಲೆಯಲ್ಲಿ ಆಗಸ್ಟ್ 15ರಿಂದ 19ರ ತನಕ ಹಾಗೂ ದ್ವಿತೀಯ ಟೆಸ್ಟ್ ಪಂದ್ಯವು ಕೊಲಂಬೊದಲ್ಲಿ ಆಗಸ್ಟ್ 23ರಿಂದ 27ರ ತನಕ ನಡೆಯಲಿದೆ.
ಬಿಸಿಸಿಐ ಪೋಸ್ಟ್ ಮಾಡಿರುವ ವೀಡಿಯೊದಲ್ಲಿ ಆಟಗಾರರೊಂದಿಗೆ ಮಾತನಾಡುತ್ತಿದ್ದ ಗಂಭೀರ್, ‘‘ನಮ್ಮ ಮುಂದೆ ಏನಿದೆ ಎಂದು ನಮಗೆ ತಿಳಿದಿದೆ. ನಾವು ಯಾವುದಕ್ಕಾಗಿ ಆಡುತ್ತಿದ್ದೇವೆಂದು ನಮಗೆ ತಿಳಿದಿದೆ. ಆಗಸ್ಟ್ 15ರಂದು ಬೆಳಗ್ಗೆ ನಾವು ಮೊದಲು ಬ್ಯಾಟಿಂಗ್ ಮಾಡಿದರೂ ಅಥವಾ ಮೊದಲು ಬೌಲಿಂಗ್ ಮಾಡಿದರೂ ಪ್ರತಿಯೊಂದಕ್ಕೂ ಉತ್ತರ ನೀಡಲು ಸಿದ್ಧವಿರಬೇಕು. ನಮ್ಮ ಮೇಲೆ ಎಸೆಯುವ ಪ್ರತಿಯೊಂದು ಪ್ರಶ್ನೆಗೂ ಉತ್ತರಕ್ಕಾಗಿ ನಾವು ಸಿದ್ಧರಿರಬೇಕು. ಇಂದಿನಿಂದ ಎಲ್ಲದ್ದಕ್ಕೂ ಸಿದ್ದರಾಗಿರಬೇಕು’’ ಎಂದು ಕಿವಿಮಾತು ಹೇಳಿದರು.
ಹೊಸ ಆಟಗಾರರಾದ ಸಾರಾಂಶ್ ಜೈನ್ ಹಾಗೂ ಆಕಿಬ್ ನಬಿ, ನೂತನ ಫೀಲ್ಡಿಂಗ್ ಕೋಚ್ ಶುಭದೀಪ್ ಘೋಷ್ ಅವರನ್ನು ಗಂಭೀರ್ ಭಾರತ ತಂಡಕ್ಕೆ ಸ್ವಾಗತಿಸಿದರು.
‘‘ನಮ್ಮಲ್ಲಿ ಒಂದೆರಡು ಹೊಸ ಮುಖಗಳು ಇದ್ದಾರೆ. ಮೊದಲಿಗೆ, ಸಾರಾಂಶ್ಗೆ ಅಭಿನಂದನೆಗಳು, ನೀವು ಇಲ್ಲಿಗೆ ಬರಲು ಸಾಕಷ್ಟು ಶ್ರಮಿಸಿದ್ದೀರಿ. ನಿಮಗೆ ಅವಕಾಶ ಸಿಕ್ಕಾಗಲೆಲ್ಲಾ ನಿಮ್ಮ ಕುಟುಂಬ ಹಾಗೂ ನಿಮ್ಮ ದೇಶ ಹೆಮ್ಮೆಪಡುವಂತೆ ನೋಡಿಕೊಳ್ಳಿ’’ ಎಂದು ಮಧ್ಯಪ್ರದೇಶದ ಆಲ್ರೌಂಡರ್ರನ್ನು ಗಂಭೀರ್ ಸ್ವಾಗತಿಸಿದರು.
‘‘ಎರಡನೇಯದಾಗಿ ನಾನು ಆಕಿಬ್ರನ್ನು ಅಭಿನಂದಿಸಲು ಬಯಸುತ್ತೇನೆ. ಕಳೆದ ಋತುವಿನಲ್ಲಿ ನೀವು ಅದ್ಭುತ ಪ್ರದರ್ಶನ ನೀಡಿದ್ದೀರಿ. ಜಮ್ಮು-ಕಾಶ್ಮೀರ ತಂಡ ರಣಜಿ ಟ್ರೋಫಿ ಟೂರ್ನಿಯನ್ನು ಗೆಲ್ಲುವಂತೆ ಮಾಡಿದ್ದೀರಿ. ಇದೊಂದು ದೊಡ್ಡ ಸಾಧನೆ. ನಿಮಗೆ ಮತ್ತೊಮ್ಮೆ ಅಭಿನಂದನೆಗಳು’’ಎಂದು ಗಂಭೀರ್ ಹೇಳಿದ್ದಾರೆ.






