ತಡವಾಗಿ ಇನಿಂಗ್ಸ್ ಡಿಕ್ಲೇರ್ ಘೋಷಣೆ ಮಾಡಲಾಯಿತೇ?
ಬೌಲಿಂಗ್ ಕೋಚ್ ಮೋರ್ನ್ ಮೊರ್ಕೆಲ್ ವಿವರಣೆ

Photo: X/@BCCI
ಲಂಡನ್, ಜು. 6: ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ನ ನಾಲ್ಕನೇ ದಿನವಾದ ಶನಿವಾರ ಮುಹಮ್ಮದ್ ಸಿರಾಜ್ ಮತ್ತು ಆಕಾಶ್ ದೀಪ್ ಇಂಗ್ಲೆಂಡ್ ಬ್ಯಾಟರ್ಗಳ ಮೇಲೆ ಸವಾರಿ ಮಾಡಿದರು. ಅವರು ದಿನದಾಟದ ವೇಳೆಗೆ, ಇಂಗ್ಲೆಂಡ್ನ ದ್ವಿತೀಯ ಇನಿಂಗ್ಸ್ನಲ್ಲಿ ಮೂರು ವಿಕೆಟ್ಗಳನ್ನು ಕಿತ್ತರು.
ಪಂದ್ಯದ ಐದನೇ ದಿನವಾದ ರವಿವಾರ 90 ಓವರ್ಗಳಲ್ಲಿ 7 ವಿಕೆಟ್ಗಳನ್ನು ಉರುಳಿಸುವ ಅಗತ್ಯವನ್ನು ಭಾರತ ಹೊಂದಿತ್ತು. ಇದರೊಂದಿಗೆ ಪಂದ್ಯವನ್ನು ಗೆದ್ದು ಸರಣಿಯನ್ನು 1-1ರಿಂದ ಸಮಬಲಗೊಳಿಸುವ ನಿಟ್ಟಿನಲ್ಲಿ ಭಾರತ ಮುಂದುವರಿಯುತ್ತಿತ್ತು. ಆದರೆ, ಐದನೇ ದಿನದಾಟದ ವೇಳೆ ಮಳೆಯ ಸಹಕಾರವನ್ನು ಪಡೆದು ಇಂಗ್ಲೆಂಡ್ಗೆ ಪಂದ್ಯವನ್ನು ಡ್ರಾಗೊಳಿಸಲು ಸಾಧ್ಯವಾಗಬಹುದೇ ಎಂಬ ಭಯ ಕೆಲವರನ್ನು ಕಾಡಿತು. ಭಾರತ ತನ್ನ ಎರಡನೇ ಇನಿಂಗ್ಸ್ ಡಿಕ್ಲೇರ್ ಮಾಡಲು ವಿಳಂಬಿಸಿತೇ ಎಂಬ ಸಂಶಯವೂ ಒಂದು ವಲಯದಲ್ಲಿ ಸುಳಿಯಿತು.
ಭಾರತವು ತನ್ನ ಎರಡನೇ ಇನ್ನಿಂಗ್ಸ್ ಅನ್ನು ಸ್ವಲ್ಪ ಬೇಗನೇ ಡಿಕ್ಲೇರ್ ಮಾಡಬಹುದಾಗಿತ್ತೇ ಎಂಬ ಪ್ರಶ್ನೆಯನ್ನು ತಂಡದ ಬೌಲಿಂಗ್ ಕೋಚ್ ಮೋರ್ನ್ ಮೊರ್ಕೆಲ್ರ ಮುಂದಿಡಲಾಯಿತು. ಅವರು ಈ ನಿರ್ಧಾರದ ಹಿಂದಿನ ತರ್ಕವನ್ನು ವಿವರಿಸಿದರು.
ಇನಿಂಗ್ಸ್ ಡಿಕ್ಲೇರ್ ಮಾಡುವ ವಿಷಯದ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಗಿತ್ತು ಎಂದು ಮೊರ್ಕೆಲ್ ತಿಳಿಸಿದರು. ಹವಾಮಾನವನ್ನು ಯಾರೂ ನಿಯಂತ್ರಿಸುವುದು ಸಾಧ್ಯವಿಲ್ಲವಾದುದರಿಂದ, ಇನಿಂಗ್ಸ್ ಮುಕ್ತಾಯಗೊಳಿಸುವ ಮೊದಲು ತೃಪ್ತಿಕರ ಪರಿಸ್ಥಿತಿಯನ್ನು ತಲುಪಲು ತಂಡವು ಬಯಸಿತ್ತು ಎಂದು ಅವರು ನುಡಿದರು. ಅದೂ ಅಲ್ಲದೆ, ನಾಲ್ಕನೇ ದಿನದಾಟದ ಪಂದ್ಯಕ್ಕೆ ಮುನ್ನ ಇಂಗ್ಲೆಂಡ್ನ ಕೆಲವು ವಿಕೆಟ್ಗಳನ್ನು ಉರುಳಿಸುವ ಯೋಜನೆಯನ್ನು ಪರಿಪೂರ್ಣವಾಗಿ ಕಾರ್ಯರೂಪಕ್ಕೆ ತರಲಾಗಿದೆ ಎಂದು ಅವರು ಹೇಳಿದರು.
‘‘ನಾಲ್ಕನೇ ದಿನದ ಆಟದ ವೇಳೆ, ಇನಿಂಗ್ಸ್ ಡಿಕ್ಲೇರ್ ಮಾಡುವ ವಿಷಯದ ಬಗ್ಗೆ ನಾವು ಸುದೀರ್ಘ ಚರ್ಚೆ ಮಾಡಿದೆವು. ಪಿಚ್ ಆಗಲೂ ಬ್ಯಾಟಿಂಗ್ಗೆ ಉತ್ತಮವಾಗಿಯೇ ಇತ್ತು. ದಿನದ ಕೊನೆಯ ಹಂತದಲ್ಲೂ ನಮ್ಮ ಹುಡುಗರು ಅದರಲ್ಲಿ ಸುಲಲಿತವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಅವರು ಓವರ್ಗೆ 4-5 ರನ್ ಗಳಿಸುವ ನಿಟ್ಟಿನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು’’ ಎಂದು ದಕ್ಷಿಣದ ಆಫ್ರಿಕದ ಮಾಜಿ ಬೌಲರ್ ಮೊರ್ಕೆಲ್ ತಿಳಿಸಿದರು.
‘‘ಹವಾಮಾನವನ್ನು ನಾವು ನಿಯಂತ್ರಿಸಲು ಸಾಧ್ಯವಿಲ್ಲ. ನಮ್ಮನ್ನು ನಾವು ಉತ್ತಮ ಸ್ಥಿತಿಯಲ್ಲಿ ಇರಿಸುವುದು ಮತ್ತು ಕೊನೆಯ 20-25 ಓವರ್ಗಳನ್ನು ಅವರು ಆಡಲು ಬಿಟ್ಟು ಕೆಲವು ವಿಕೆಟ್ಗಳನ್ನು ಪಡೆಯುವುದು ಯೋಜನೆಯಾಗಿತ್ತು. ನಾವು ವಿಕೆಟ್ಗಳನ್ನು ಪಡೆದೆವು. ಅದು ನಮಗೆ ಬೋನಸ್ ಆಗಿತ್ತು’’ ಎಂದು ಅವರು ನುಡಿದರು.