ನೀತಿ ಸಂಹಿತೆ ಉಲ್ಲಂಘನೆ: ಪ್ರಭಾತ್ ಜಯಸೂರ್ಯಗೆ ಐಸಿಸಿ ಛೀಮಾರಿ

ಪ್ರಭಾತ್ ಜಯಸೂರ್ಯ | Photo Credit : ANI
ಕೊಲಂಬೊ: ಭಾರತ ತಂಡದ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನವಾದ ಸೋಮವಾರ ಐಸಿಸಿ ನೀತಿ ಸಂಹಿತೆಯ ಲೆವೆಲ್ 1 ಅನ್ನು ಉಲ್ಲಂಘಿಸಿದ ಶ್ರೀಲಂಕಾ ತಂಡದ ಎಡಗೈ ಸ್ಪಿನ್ನರ್ ಪ್ರಭಾತ್ ಜಯಸೂರ್ಯಗೆ ಐಸಿಸಿ ಛೀಮಾರಿ ಹಾಕಿದೆ.
ಜಯಸೂರ್ಯ ಔಟಾದ ನಂತರ ತನ್ನ ಕೈಗವಸುಗಳನ್ನು ಎಸೆದಿದ್ದರು. ಈ ಮೂಲಕ ಕ್ರಿಕೆಟ್ ಸಲಕರಣೆಯ ದುರುಪಯೋಗಕ್ಕೆ ಸಂಬಂಧಿಸಿದ ಆರ್ಟಿಕಲ್ 2.2 ಅನ್ನು ಉಲ್ಲಂಘಿಸಿದ್ದಾರೆಂದು ನಿರ್ಣಯಿಸಲಾಗಿದೆ. ಜಯಸೂರ್ಯಗೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ.
ತಪ್ಪನ್ನು ಒಪ್ಪಿಕೊಂಡಿರುವ ಜಯಸೂರ್ಯ ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್ ಪ್ರಸ್ತಾವಿಸಿರುವ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ.
ಎರಡನೇ ದಿನದಾಟದ ಕೊನೆಯ ಎಸೆತದಲ್ಲಿ ಮಾನವ್ ಸುಥಾರ್ ಅವರು ಜಯಸೂರ್ಯ ವಿಕೆಟನ್ನು ಉರುಳಿಸಿದಾಗ ಈ ಘಟನೆ ನಡೆದಿದೆ. ಸುಥಾರ್ ಅವರು ಪೆವಿಲಿಯನ್ಗೆ ವಾಪಸಾಗುತ್ತಿದ್ದಾಗ ತಮ್ಮ ಬ್ಯಾಟನ್ನು ಬೌಂಡರಿ ವೆಡ್ಜ್ಗೆ ಹೊಡೆದಿದ್ದರು.
ಯಶಸ್ವಿ ಜೈಸ್ವಾಲ್ ಹಾಗೂ ಅಸಿಥಾ ಫೆರ್ನಾಂಡೊ ನಂತರ ಪ್ರಸಕ್ತ ಪಂದ್ಯದಲ್ಲಿ ಐಸಿಸಿಯಿಂದ ಶಿಕ್ಷೆಗೆ ಒಳಗಾದ ಮೂರನೇ ಆಟಗಾರನಾಗಿದ್ದಾರೆ. ಮೊದಲ ದಿನದಾಟದ ವೇಳೆ ಮೈದಾನದಲ್ಲಿ ಮಾತಿನ ಚಕಮಕಿಯಲ್ಲಿ ತೊಡಗಿದ್ದ ಜೈಸ್ವಾಲ್ ಹಾಗೂ ಫೆರ್ನಾಂಡೊಗೆ ಪಂದ್ಯ ಶುಲ್ಕದಲ್ಲಿ ಶೇ.25ರಷ್ಟು ದಂಡ ವಿಧಿಸಲಾಗಿತ್ತು.






