ಭಾರತೀಯ ಫುಟ್ಬಾಲ್ ಕೋಚ್ ಹುದ್ದೆಗೆ ಸ್ಪ್ಯಾನಿಷ್ ಫುಟ್ಬಾಲ್ ದಂತಕಥೆ ಕ್ಸೇವಿ ಹೆಸರಿನಲ್ಲಿ ಅರ್ಜಿ ಸಲ್ಲಿಸಿದ ಕಾಲೇಜು ವಿದ್ಯಾರ್ಥಿ!
‘ChatGPT’ ಬಳಸಿ ಇಮೇಲ್ ಕಳಿಸಿದ ವೆಲ್ಲೂರಿನ ವಿದ್ಯಾರ್ಥಿ

ಕ್ಸೇವಿ ಹೆರ್ನಾಂಡೆಜ್ (Photo credit: AP)
ಹೊಸದಿಲ್ಲಿ: ಭಾರತದ ಪುರುಷರ ರಾಷ್ಟ್ರೀಯ ಫುಟ್ಬಾಲ್ ತಂಡದ ಕೋಚ್ ಹುದ್ದೆಗೆ ಸ್ಪ್ಯಾನಿಷ್ ಫುಟ್ಬಾಲ್ ದಂತಕಥೆ ಕ್ಸೇವಿ ಹೆರ್ನಾಂಡೆಜ್ ಅವರು ಅರ್ಜಿ ಸಲ್ಲಿಸಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವರದಿಗಳು ಫುಟ್ಬಾಲ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಹುಟ್ಟಿಸಿತ್ತು. ಆದರೆ ಈ ಬೆಳವಣಿಗೆಯ ಹಿಂದೆ ಅಚ್ಚರಿಯಷ್ಟು ವಿಚಿತ್ರವಾದ ನಿಜಾಂಶವೊಂದು ಹೊರಬಿದ್ದಿದೆ.
‘ದಿ ಟೆಲಿಗ್ರಾಫ್’ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಂತೆ, ಈ ಇಮೇಲ್ ಕಳುಹಿಸಿದ್ದ ವ್ಯಕ್ತಿ ಕೇವಲ 19 ವರ್ಷದ, ತಮಿಳುನಾಡಿನ ವೆಲ್ಲೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (VIT) ವ್ಯಾಸಾಂಗ ಮಾಡುತ್ತಿರುವ ಕಾಲೇಜು ವಿದ್ಯಾರ್ಥಿ ಎಂಬುದು ಬಹಿರಂಗವಾಗಿದೆ.
ಅಚ್ಚರಿಯ ವಿಷಯವೆಂದರೆ, ಈ ನಕಲಿ ಇಮೇಲ್ ಅನ್ನು ರಚಿಸಲು ಆ ವಿದ್ಯಾರ್ಥಿ ಚಾಟ್ಜಿಪಿಟಿಯನ್ನು ಬಳಸಿದ್ದಾನೆ ಎಂದು ತಿಳಿದು ಬಂದಿದೆ.
ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (AIFF) ಜುಲೈ 26ರಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಪ್ರಮುಖ ಅರ್ಜಿದಾರರ ಪಟ್ಟಿಯಲ್ಲಿ ಕ್ಸೇವಿ ಮತ್ತು ಮ್ಯಾಂಚೆಸ್ಟರ್ ಸಿಟಿಯ ಕೋಚ್ ಪೆಪ್ ಗಾರ್ಡಿಯೊಲಾ ಅವರ ಹೆಸರುಗಳು ಕಾಣಿಸಿಕೊಂಡಿದ್ದವು. ಆದರೆ, ಇವುಗಳ ಸತ್ಯಾಸತ್ಯತೆ ಕುರಿತು ಪರಿಶೀಲನೆ ನಡೆಸಿದ ಎಐಎಫ್ಎಫ್, ಈಮೇಲ್ಗಳು ಅಧಿಕೃತವಲ್ಲ ಎಂದು ಸ್ಪಷ್ಟಪಡಿಸಿದೆ.
"ನಾವು ಕ್ಸೇವಿ ಮತ್ತು ಗಾರ್ಡಿಯೊಲಾ ಅವರಿಂದ ಇಮೇಲ್ನಲ್ಲಿ ಅರ್ಜಿಗಳನ್ನು ಸ್ವೀಕರಿಸಿದ್ದೇವೆ. ಆದರೆ ಅವುಗಳನ್ನು ದೃಢೀಕರಿಸಲು ಸಾಧ್ಯವಾಗಿಲ್ಲ. ಈಮೇಲ್ಗಳು ನಕಲಿ" ಎಂದು ಎಐಎಫ್ಎಫ್ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ನೂತನ ಕೋಚ್ ನೇಮಕಾತಿ ಪ್ರಕ್ರಿಯೆ ಇನ್ನೂ ಅಂತಿಮಗೊಳ್ಳದ ಕಾರಣ, ಭಾರತೀಯ ಫುಟ್ಬಾಲ್ ತಂಡಕ್ಕೆ ಕೋಚ್ ಯಾರಾಗಲಿದ್ದಾರೆ ಎಂಬ ಕುತೂಹಲ ಮುಂದುವರೆದಿದೆ. ಅಗತ್ಯ ಮೂಲ ಸೌಕರ್ಯಗಳ ವಿಚಾರದಲ್ಲಿ ಎಐಎಫ್ಎಫ್ ಹಾಗೂ ಫುಟ್ಬಾಲ್ ಸ್ಪೋರ್ಟ್ ಡೆವಲಪ್ಮೆಂಟ್ ಲಿಮಿಟೆಡ್ (FSDL) ನಡುವೆ ಇನ್ನೂ ಚರ್ಚೆಗಳು ಮುಕ್ತಾಯವಾಗಿಲ್ಲ. ಹಾಗಾಗಿ ಇಂಡಿಯನ್ ಸೂಪರ್ ಲೀಗ್ ಬಗ್ಗೆಯೂ ಅನಿಶ್ಚಿತತೆ ಮುಂದುವರೆದಿದೆ.
ನೂತನ ಕೋಚ್ ಆಯ್ಕೆ ಪ್ರಕ್ರಿಯೆಯ ಅಂತಿಮ ಹಂತಕ್ಕೆ ಬಂದಿದ್ದು, ಮೂರು ಅಭ್ಯರ್ಥಿಗಳ ಹೆಸರು ಅಂತಿಮ ಆಯ್ಕೆಯಲ್ಲಿದೆ ಎನ್ನಲಾಗಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಭಾರತೀಯ ಹಾಗೂ ಏಷ್ಯನ್ ಫುಟ್ಬಾಲ್ ಬಗ್ಗೆ ತಿಳುವಳಿಕೆ ಇರುವ ವ್ಯಕ್ತಿಯನ್ನು ನೇಮಿಸುವ ನಿಲುವಿಗೆ ಎಐಎಫ್ಎಫ್ ಬದ್ಧವಾಗಿದೆ ಎಂದು ತಿಳಿದು ಬಂದಿದೆ.
"ಭಾರತೀಯ ಹಾಗೂ ಏಷ್ಯನ್ ಫುಟ್ಬಾಲ್ ವಾತಾವರಣದ ತಿಳುವಳಿಕೆ ಇರುವಂತಹ ಕೋಚ್ ನೇಮಿಸುವ ಕುರಿತು ಚರ್ಚೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಇದು ಮುಂದಿನ ದಿನಗಳಲ್ಲಿ ರಾಷ್ಟ್ರೀಯ ತಂಡವನ್ನು ಕಟ್ಟಲು ಸಹಕಾರಿಯಾಗಲಿದೆ. ಆ ಮೂಲಕ ದೀರ್ಘಕಾಲಿಕ ಯಶಸ್ಸಿಗೆ ನೆರವಾಗಲಿದೆ," ಎಂದು ಪ್ರಕಟಣೆಯಲ್ಲಿ ಎಐಎಫ್ಎಫ್ ತಿಳಿಸಿದೆ.







