Commonwealth games 2026 | ಸೆಮಿಫೈನಲ್ ನಲ್ಲಿ ನಿರ್ಗಮಿಸಿದ ಶ್ರೀಹರಿ; ಪದಕದ ಸನಿಹದಲ್ಲಿ ಎಡವಿದ ಬುಡಿಗಿನಾ

ಶ್ರೀಹರಿ ನಟರಾಜ್ | Photo Credit : PTI
ಗ್ಲಾಸ್ಗೊ, ಜು. 25: ಕಾಮನ್ವೆಲ್ತ್ ಗೇಮ್ಸ್ನಲ್ಲಿ ಶುಕ್ರವಾರ ನಡೆದ ಈಜು ಸ್ಪರ್ಧೆಗಳಲ್ಲಿ ಭಾರತದ ಶ್ರೀಹರಿ ನಟರಾಜ್ ಮತ್ತು ಇಬ್ಬರು ಪ್ಯಾರಾ ಈಜುಗಾರರು ತಮ್ಮ ತಮ್ಮ ವಿಭಾಗಗಳಲ್ಲಿ ಪದಕ ವಂಚಿತರಾಗಿದ್ದಾರೆ.
ಪುರುಷರ 50 ಮೀಟರ್ ಬ್ಯಾಕ್ಸ್ಟ್ರೋಕ್ ಸೆಮಿಫೈನಲ್ನಲ್ಲಿ ಶ್ರೀಹರಿ 25.29 ಸೆಕೆಂಡುಗಳಲ್ಲಿ ದಡ ತಲುಪಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಅದರೊಂದಿಗೆ ಅವರ ಅಭಿಯಾನ ಅಂತ್ಯಗೊಂಡಿತು.
ಸೆಮಿಫೈನಲ್ನಲ್ಲಿ ವಿಜಯ ಸಾಧಿಸಿದ ದಕ್ಷಿಣ ಆಫ್ರಿಕದ ಪೀಟರ್ ಕೂಟ್ಸೀ ಸ್ಪರ್ಧೆಯನ್ನು 24.29 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ಕೂಟ ದಾಖಲೆ ನಿರ್ಮಿಸಿದರು.
ಇಂಗ್ಲೆಂಡ್ ನ ಆಲಿವರ್ ಮಾರ್ಗನ್ 24.65 ಸೆಕೆಂಡುಗಳಲ್ಲಿ ಸ್ಪರ್ಧೆಯನ್ನು ಪೂರ್ಣಗೊಳಿಸಿ ಎರಡನೇ ಸ್ಥಾನ ಪಡೆದರೆ, ಆಸ್ಟ್ರೇಲಿಯದ ಐಸಾಕ್ ಕೂಪರ್ (24.85) ಮತ್ತು ಇಂಗ್ಲೆಂಡ್ನ ಜಾಕ್ ಸ್ಕರಿ (24.94) ಕ್ರಮವಾಗಿ, ಮೂರು ಮತ್ತು ನಾಲ್ಕನೇ ಸ್ಥಾನಗಳನ್ನು ಪಡೆದರು. ಸೆಮಿಫೈನಲ್ನ ಅಗ್ರ ನಾಲ್ವರು ಸ್ಪರ್ಧಿಗಳು ಫೈನಲ್ ತಲುಪಿದ್ದಾರೆ.
ಪುರುಷರ ಪ್ಯಾರಾ 100 ಮೀಟರ್ ಫ್ರೀಸ್ಟೈಲ್ ಎಸ್13 ಫೈನಲ್ನಲ್ಲಿ, ಆರ್.ವಿ.ವಿ.ಬಿ.ಕೆ. ಬುಡಿಗಿನ 57.57 ಸೆಕೆಂಡುಗಳಲ್ಲಿ ದಡ ತಲುಪಿ ಜಂಟಿ ನಾಲ್ಕನೇ ಸ್ಥಾನ ಪಡೆದರು. ಇದರೊಂದಿಗೆ, ಕೂದಲೆಳೆಯ ಅಂತರದಿಂದ ಪದಕವನ್ನು ತಪ್ಪಿಸಿಕೊಂಡರು.
ಅವರು ಸ್ಕಾಟ್ಲ್ಯಾಂಡ್ನ ಜೇಮ್ಸ್ ಕ್ಲೆಗ್ ಅವರೊಂದಿಗೆ ಸಮಬಲ ಸಾಧಿಸಿದರು.
56.86 ಸೆಕೆಂಡುಗಳಲ್ಲಿ ಸ್ಪರ್ಧೆ ಮುಗಿಸಿ ಕಂಚಿನ ಪದಕ ಗೆದ್ದ ಇಂಗ್ಲೆಂಡ್ನ ಮ್ಯಾಥ್ಯೂ ರೆಡ್ಫರ್ನ್ ಅವರಿಗಿಂತ ಬುಡಿಗಿನಾ ಕೇವಲ 0.71 ಸೆಕೆಂಡುಗಳಷ್ಟು ಹಿನ್ನಡೆಯಲ್ಲಿದ್ದರು.
ಭಾರತದ ಆಲಿ ಇಮಾಮ್ 1:03.73 ಸಮಯದೊಂದಿಗೆ ಏಳನೇ ಸ್ಥಾನ ಪಡೆದರು.
ದಕ್ಷಿಣ ಆಫ್ರಿಕದ ನತಾನ್ ಹೆಂಡ್ರಿಕ್ಸ್ 54.54 ಸೆಕೆಂಡ್ಗಳಲ್ಲಿ ಪೂರ್ಣಗೊಳಿಸಿ ಚಿನ್ನದ ಪದಕ ಗೆದ್ದರೆ, ಸ್ಕಾಟ್ಲ್ಯಾಂಡ್ನ ಸ್ಟೀಫನ್ ಕ್ಲೆಗ್ 55.16 ಸೆಕೆಂಡುಗಳ ದಾಖಲೆಯೊಂದಿಗೆ ಬೆಳ್ಳಿ ಪದಕ ಪಡೆದರು.






