Commonwealth Games 2026 | ಟ್ರಿಪಲ್ ಜಂಪ್ ನಲ್ಲಿ ಪ್ರವೀಣ್ ಚಿತ್ರವೇಲ್ಗೆ ಬೆಳ್ಳಿ, ಕಂಚಿಗೆ ತೃಪ್ತಿಪಟ್ಟ ಸೆಲ್ವ ಪ್ರಭು

ಪ್ರವೀಣ್ ಚಿತ್ರವೇಲ್ | Photo Credit : PTI
ಗ್ಲಾಸ್ಗೊ: ಕಾಮನ್ವೆಲ್ತ್ ಗೇಮ್ಸ್ನ ಪುರುಷರ ಟ್ರಿಪಲ್ ಜಂಪ್ ಫೈನಲ್ನಲ್ಲಿ ಭಾರತದ ಕ್ರೀಡಾಪಟುಗಳಾದ ಪ್ರವೀಣ್ ಚಿತ್ರವೇಲ್ ಹಾಗೂ ಸೆಲ್ವ ಪ್ರಭು ತಿರುಮಾರನ್ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕವನ್ನು ಜಯಿಸಿದರು.
ಶನಿವಾರ ನಡೆದ ಫೈನಲ್ನಲ್ಲಿ ಪ್ರವೀಣ್ 16.58 ಮೀ. ಎತ್ತರಕ್ಕೆ ಜಿಗಿದು ಎರಡನೇ ಸ್ಥಾನ ಪಡೆದರೆ, ಜಮೈಕಾದ ಜೋರ್ಡನ್ ಸ್ಕಾಟ್(16.72 ಮೀ.)ಮೊದಲ ಸ್ಥಾನ ಪಡೆದರು. ಸೆಲ್ವ ಪ್ರಭು(16.52 ಮೀ.)ಮೂರನೇ ಸ್ಥಾನ ಪಡೆದಿದ್ದಾರೆ.
ಏಶ್ಯನ್ ಗೇಮ್ಸ್ನಲ್ಲಿ ಕಂಚಿನ ಪದಕ ಜಯಿಸಿದ್ದ ಚಿತ್ರವೇಲ್ಗ್ಲಾಸ್ಗೊದಲ್ಲಿ ಬೆಳ್ಳಿ ಪದಕ ಜಯಿಸಿ ತನ್ನ ಪ್ರದರ್ಶನ ಉತ್ತಮಪಡಿಸಿಕೊಂಡಿದ್ದಾರೆ. ಸೆಲ್ವಪ್ರಭು ಅಂತರ್ರಾಷ್ಟ್ರೀಯ ಸ್ಪರ್ಧಾವಳಿಯಲ್ಲಿ ತನ್ನ ಮೊದಲ ಪದಕ ಜಯಿಸಿದರು.
ಭಾರತದ ಪ್ಯಾರಾ ಅತ್ಲೀಟ್ ರಮೇಶ್ ಷಣ್ಮುಗಮ್ ಪುರುಷರ ಟಿ54 ವಿಭಾಗದ 1,500 ಮೀ.ಓಟದಲ್ಲಿ 3:23.59 ಅವಧಿಯಲ್ಲಿ ಗುರಿ ತಲುಪಿ ಏಳನೇ ಸ್ಥಾನಪಡೆದರು.
ಮಹಿಳೆಯರ 10,000 ಮೀ. ರೇಸ್ ವಾಕ್ನಲ್ಲಿ ಪ್ರಿಯಾಂಕಾ ಗೋಸ್ವಾಮಿ 45:53.93 ಅವಧಿಯಲ್ಲಿ ಗುರಿ ತಲುಪಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಸ್ಪರ್ಧೆಯಲ್ಲಿದ್ದ ಇನ್ನೋರ್ವ ಭಾರತೀಯ ರವಿನಾ ಸ್ಪರ್ಧೆಗೆ ಅನರ್ಹರಾದರು.
ಪ್ಯಾರಾ ಶಾಟ್ಪುಟ್ : F 57 ವಿಭಾಗದಲ್ಲಿ ಸೋಮನ್ ರಾಣಾಗೆ ಸ್ವರ್ಣ, ಬೆಳ್ಳಿ ಗೆದ್ದ ಶುಭಮ್
ಕಾಮನ್ವೆಲ್ತ್ ಗೇಮ್ಸ್ನಲ್ಲಿ ಶನಿವಾರ ಭಾರತದ ಪಾಲಿಗೆ ಮತ್ತೊಂದು ಸ್ಮರಣೀಯ ದಿನವಾಗಿ ಪರಿಣಮಿಸಿದ್ದು, ಪ್ಯಾರಾ ಶಾಟ್ಪುಟ್ ಸ್ಪರ್ಧೆಯ ಪುರುಷರ ಎಫ್ 57 ವಿಭಾಗದಲ್ಲಿ ಸೋಮನ್ ರಾಣಾ ಚಿನ್ನದ ಪದಕ ಜಯಿಸಿದರೆ, ಶುಭಮ್ ಜುಯಲ್ ಬೆಳ್ಳಿ ಪದಕ ತನ್ನದಾಗಿಸಿಕೊಂಡರು.
ಪುರುಷರ ಎಫ್ 57 ಶಾಟ್ಪುಟ್ನಲ್ಲಿ ಸ್ಪರ್ಧಿಸಿದ ಸೋಮನ್ ರಾಣಾ 13.40 ಮೀ.ದೂರಕ್ಕೆ ಶಾಟ್ಪುಟ್ ಎಸೆದು ಈ ವರ್ಷದ ಶ್ರೇಷ್ಠ ಪ್ರದರ್ಶನದೊಂದಿಗೆ ಚಿನ್ನದ ಪದಕ ಗೆದ್ದುಕೊಂಡರು. ಭಾರತದ ಇನ್ನೋರ್ವ ಸ್ಪರ್ಧಿ ಶುಭಮ್ ಜುಯಲ್ ಕೂಡ 13.28 ಮೀ.ದೂರಕ್ಕೆ ಶಾಟ್ಪುಟ್ ಎಸೆದು ಈ ವರ್ಷದ ಶ್ರೇಷ್ಠ ಪ್ರದರ್ಶನದೊಂದಿಗೆ ಬೆಳ್ಳಿ ಪದಕ ಜಯಿಸಿದರು. ಕ್ಯಾಮರೂನ್ನ ಸೆಡ್ರಿಕ್ ಇದ್ರಿಸ್ ಅವರು (12.57 ಮೀ.)ಮೂರನೇ ಸ್ಥಾನ ಪಡೆದರು.
ತನ್ನ ಎರಡನೇ ಪ್ರಯತ್ನದಲ್ಲಿ 13.08 ಮೀ.ದೂರಕ್ಕೆ ಶಾಟ್ಪುಟ್ ಎಸೆದ ಶುಭಮನ್ ಸ್ವಲ್ಪ ಹೊತ್ತು ಮುನ್ನಡೆ ಪಡೆದು ಭಾರತಕ್ಕೆ ಕನಿಷ್ಠ ಬೆಳ್ಳಿ ಪದಕ ಖಚಿತಪಡಿಸಿದರು.






